'ಪಟಾಕಿ ಸಿಡಿಸಿದ ಮೂರ್ಖರು': ಟ್ವಿಟರ್ ನಲ್ಲಿ ಸೋನಂ ಕಪೂರ್ ಆಕ್ರೋಶ

Update: 2020-04-06 11:09 GMT

ಹೊಸದಿಲ್ಲಿ: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾಂಕೇತಿಕವಾಗಿ ತೋರ್ಪಡಿಸಲು ಹಣತೆ ಹಚ್ಚುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಆದರೆ ಕೆಲ ಮಂದಿ ಪಟಾಕಿಗಳನ್ನು ಸಿಡಿಸಿರುವುದರ ಬಗ್ಗೆ ಬಾಲಿವುಡ್ ನಟಿ ಸೋನಂ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಇಂದು ಮಾಡಿರುವ ಟ್ವೀಟ್ ಅವರನ್ನು ಟ್ರೆಂಡಿಂಗ್ ಆಗಿಸಿದೆ. "ಜನರು ಪಟಾಕಿ ಸಿಡಿಸುತ್ತಿದ್ದಾರೆ. ನಾಯಿಗಳು ಹೊರಕ್ಕೆ ಹೋಗುತ್ತಿವೆ. ಜನರು ದೀಪಾವಳಿ ಅಂದುಕೊಂಡಿದ್ದಾರೆಯೇ?, ನನಗೆ ಗೊಂದಲವಾಗಿದೆ'' ಎಂದು ಒಂದು ಟ್ವೀಟ್‍ ನಲ್ಲಿ ಹೇಳಿದ ಅವರು ಇನ್ನೊಂದು ಟ್ವೀಟ್‍ನಲ್ಲಿ "ಸಂಪೂರ್ಣ ಶಾಂತ ಸ್ಥಿತಿ ಹಾಗೂ ಮೌನವಿತ್ತು. ಆದರೆ ಈಗ ಹಕ್ಕಿಗಳು, ನಾಯಿಗಳು ಹಾಗೂ ಸೈರನ್‍ ಗಳು ದಕ್ಷಿಣ ದಿಲ್ಲಿಯಲ್ಲಿ ಹೊರಬರುತ್ತಿವೆ, ಏಕೆಂದರೆ ಕೆಲ ಮೂರ್ಖರು ಇಂದು ರಾತ್ರಿ ಪಟಾಕಿ ಸಿಡಿಸುತ್ತಿದ್ದಾರೆ'' ಎಂದು ಬರೆದಿದ್ದಾರೆ.

ಸೋನಂರ ಈ ಟ್ವೀಟ್ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂದ್ ಅಹುಜಾ ಜತೆ ಮೇ 2018ರಲ್ಲಿ ಆಕೆಯ ವಿವಾಹ ಸಂದರ್ಭ ಪಟಾಕಿ ಸಿಡಿಸಿರುವ ವಿಚಾರದಲ್ಲಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಆಕೆ ತನ್ನ ತಂದೆ ಹಾಗೂ ನಟ ಅನಿಲ್ ಕಪೂರ್ ಮುಂಬೈಯ ತಮ್ಮ ನಿವಾಸದ ಹೊರಗೆ ಪಟಾಕಿ ಸಿಡಿಸುತ್ತಿರುವಾಗ ಅವರ ಹತ್ತಿರದಲ್ಲಿ ನಿಂತಿರುವ ಹಳೆಯ ಫೋಟೋ ಹಾಗೂ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.

"ಪ್ರಾಣಿಗಳ ಕುರಿತು ಇಷ್ಟೊಂದು ಕಾಳಜಿ ? ಹಾಗಾದರೆ ಆಗ ಏನಾಗಿತ್ತು?'' ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು "ನೀವು ಗೊಂದಲದಲ್ಲಿದ್ದೀರಿ, ಅದು ನಿಮಗೆ ಸಹಜ'' ಎಂದು  ಟ್ವೀಟ್ ಮಾಡಿದ್ದಾರೆ.

ಇಂತಹ ಒಂದು ಟ್ರೋಲ್ ಟ್ವೀಟ್‍ ಗೆ ಪ್ರತಿಕ್ರಿಯಿಸಿದ ಸೋನಂ "ಎಲ್ಲದಕ್ಕೂ ಒಂದು ಸಮಯ ಹಾಗೂ ಸ್ಥಳ ಎಂಬುದಿದೆ'' ಎಂದು ಬರೆದಿದ್ದಾರಲ್ಲದೆ ಮಾರ್ಕ್ ಟ್ವೈನ್ ಅವರ ಮಾತನ್ನು ಉಲ್ಲೇಖಿಸಿ ``ಮೂರ್ಖರ ಜತೆ ವಾದ ಮಾಡಬೇಡಿ, ಅವರು ನಿಮ್ಮನ್ನು ಅವರ ಮಟ್ಟಕ್ಕೆ ಎಳೆದು ನಂತರ ತಮ್ಮ ಅನುಭವದಿಂದ ನಿಮ್ಮನ್ನು ಸೋಲಿಸುತ್ತಾರೆ'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News