ಕೊರೋನ ವಿರುದ್ಧ ಹೋರಾಟಕ್ಕೆ 26 ಲಕ್ಷ ರೂ.ದೇಣಿಗೆ ನೀಡಿದ ಗೋಪಿಚಂದ್

Update: 2020-04-07 05:16 GMT

ಹೊಸದಿಲ್ಲಿ, ಎ.6: ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೆಲ ಗೋಪಿಚಂದ್ ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ಭಾರತದ ಕ್ರೀಡಾಪಟುಗಳೊಂದಿಗೆ ಕೈಜೋಡಿಸಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌ನ ಮಾಜಿ ಚಾಂಪಿಯನ್ ಗೋಪಿಚಂದ್ 26 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ‘‘ಕೋವಿಡ್-19ರ ವಿರುದ್ಧ ಹೋರಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೆರವಾಗಲು ನಾನು ಸಣ್ಣ ಕೊಡುಗೆ ನೀಡುತ್ತಿದ್ದೇನೆ. ನಮ್ಮ ದೇಶ ವೈವಿಧ್ಯತೆಯಿಂದ ಕೂಡಿದ್ದು, ಎಲ್ಲ ರೀತಿಯ ಸವಾಲುಗಳ ಹೊರತಾಗಿಯೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ಮಾರ್ಗಸೂಚಿಗಳನ್ನು ಪಾಲಿಸಿ, ಮನೆಯಲ್ಲಿ ಉಳಿದುಕೊಳ್ಳುವುದರೊಂದಿಗೆ ನಾವೆಲ್ಲರೂ ಸರಕಾರಕ್ಕೆ ನೆರವಾಗಬೇಕು’’ ಎಂದು ಅರ್ಜುನ ಅವಾರ್ಡ್, ದ್ರೋಣಾಚಾರ್ಯ ಅವಾರ್ಡ್ ಹಾಗೂ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಗೋಪಿಚಂದ್ ನುಡಿದರು.

ಗೋಪಿಚಂದ್ ಈಗಾಗಲೇ ಪಿಎಂ ಕೇರ್ ಫಂಡ್‌ಗೆ 11 ಲಕ್ಷ ರೂ., ತೆಲಂಗಾಣ ಮುಖ್ಯಮಂತ್ರಿ ನಿಧಿಗೆ 10 ಲಕ್ಷ ರೂ. ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ನಿಧಿಗೆ 5 ಲಕ್ಷ ರೂ. ದೇಣಿಗೆಯನ್ನು ವರ್ಗಾಯಿಸಿದ್ದಾರೆ.

‘‘ನಮ್ಮ ಆರ್ಥಿಕತೆ ಕಂಗೆಟ್ಟಿದೆ. ಹೀಗಾಗಿ ಎಲ್ಲರೂ ಕೈಲಾದಷ್ಟು ಸಹಾಯ ಮಾಡಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಯುದ್ಧವನ್ನು ಗೆಲ್ಲಬೇಕಾಗಿದೆ’’ ಎಂದು ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್‌ರಂತಹ ಹಲವು ಬ್ಯಾಡ್ಮಿಂಟನ್ ತಾರೆಯರ ವೃತ್ತಿಜೀವನ ರೂಪಿಸಿದ ಬ್ಯಾಡ್ಮಿಂಟನ್ ಐಕಾನ್ ತಿಳಿಸಿದರು.

ಈ ಹಿಂದೆ ಕ್ರಿಕೆಟಿಗ ಸುರೇಶ್ ರೈನಾ ಪ್ರಧಾನಿ ಕೇರ್ ಫಂಡ್‌ಗೆ 31 ಲಕ್ಷ ರೂ. ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಓಟಗಾರ್ತಿ ಹಿಮಾ ದಾಸ್, ಶಟ್ಲರ್ ಪಿ.ವಿ.ಸಿಂಧು, ಕುಸ್ತಿಪಟು ಬಜರಂಗ್ ಪೂನಿಯ, ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಹಿತ ಇತರ ಕ್ರೀಡಾ ಐಕಾನ್‌ಗಳು ಕೋವಿಡ್-19 ವೈರಸ್ ವಿರುದ್ಧ ಹೋರಾಡಲು ಕೊಡುಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News