ಕೋವಿಡ್-19: ಅಗತ್ಯವಿರುವವರ ಮನೆ ಬಾಗಿಲಿಗೆ ಆಹಾರ ತಲುಪಿಸಲು ಮುಂದಾದ ನಿಕ್ ಕಿರ್ಗಿಯೊಸ್

Update: 2020-04-07 05:40 GMT

ಮುಂಬೈ, ಎ.6: ಆಸ್ಟ್ರೇಲಿಯದ ಟೆನಿಸ್ ಆಟಗಾರ ನಿಕ್ ಕಿರ್ಗಿಯೊಸ್ ಮತ್ತೊಮ್ಮೆ ಪರೋಪಕಾರ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕೊರೋನ ವೈರಸ್ ಪಿಡುಗಿನಿಂದಾಗಿ ಹಸಿವಿನಿಂದ ಬಳಲುತ್ತಿರುವ ಜನರ ಮನೆ ಬಾಗಿಲಿಗೆ ಆಹಾರ ಪೊಟ್ಟಣವನ್ನು ತಲುಪಿಸುವ ಭರವಸೆ ನೀಡಿದ್ದಾರೆ.

ಕಳೆದ ವರ್ಷ ಟೆನಿಸ್ ಮೈದಾನದೊಳಗಿನ ದುರ್ವರ್ತನೆಯಿಂದಾಗಿ ಪುರುಷರ ಟೆನಿಸ್ ಆಡಳಿತ ಮಂಡಳಿಯಿಂದ ಪರೀಕ್ಷೆಗೆ ಒಳಗಾಗಿದ್ದ ಕಿರ್ಗಿಯೊಸ್ 2020ರ ಆರಂಭದಲ್ಲಿ ತನ್ನ ದೇಶದಲ್ಲಿ ಕಾಡ್ಗಿಚ್ಚಿನ ಬಿಕ್ಕಟ್ಟು ಸಂಭವಿಸಿದಾಗ ಆಸ್ಟ್ರೇಲಿಯದ ಹೀರೊವಾಗಿ ಹೊರಹೊಮ್ಮಿದ್ದರು.

 ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಗ್ರಾನ್‌ಸ್ಲಾಮ್‌ಗಿಂತ ಮೊದಲು ಕಾಡ್ಗಿಚಿ ್ಚ ನಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ವಿಶ್ವ ಟೆನಿಸ್ ಪಟುಗಳಲ್ಲಿ ಮನವಿ ಮಾಡಿ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಮೂಲಕ ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದ್ದರು.

 ‘‘ಯಾರಾದರೂ ಕೆಲಸ ಮಾಡದೇ ಇರುವವರು, ಆದಾಯ ಇಲ್ಲದೇ ಇರುವವರು, ಆಹಾರಕ್ಕಾಗಿ ಪರದಾಡುತ್ತಿರುವವರು, ಕಷ್ಟದ ಸಮಯ ಎದುರಿಸುತ್ತಿರುವವರು...ದಯವಿಟ್ಟು ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ. ನನಗೆ ವೈಯಕ್ತಿಕ ಸಂದೇಶ ಕಳುಹಿಸಲು ಭಯ ಅಥವಾ ಮುಜುಗರ ಪಡಬೇಡಿ. ನನ್ನಲ್ಲಿ ಏನಿದೆಯೊ ಅದನ್ನು ಹಂಚಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತದೆ. ನೂಡಲ್ಸ್ ಬಾಕ್ಸ್, ಬ್ರೆಡ್ ಅಥವಾ ಹಾಲನ್ನು ನಿಮ್ಮ ಮನೆ ಬಾಗಿಲಿಗೆ ತಂದುಕೊಡುವೆ. ನನ್ನ ಬಳಿ ಯಾವುದೇ ಪ್ರಶ್ನೆ ಕೇಳಬಾರದು’’ ಎಂದು ಕಿರ್ಗಿಯೊಸ್ ಟ್ವೀಟ್ ಮಾಡಿದ್ದಾರೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಜುಲೈ ತನಕ ವಿಶ್ವದೆಲ್ಲೆಡೆ ಯಾವುದೇ ಕ್ರೀಡಾಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ 24ರ ಹರೆಯದ ಕಿರ್ಗಿಯೊಸ್ ತವರುಪಟ್ಟಣ ಕ್ಯಾನ್‌ಬೆರ್ರಾದಲ್ಲಿ ಸಮಯ ಕಳೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News