ಕ್ವಾರಂಟೈನ್ ಕೇಂದ್ರಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಅಸ್ಸಾಂ ಶಾಸಕನ ಬಂಧನ

Update: 2020-04-07 15:47 GMT

ಗುವಾಹಟಿ, ಎ.7: ರಾಜ್ಯದಲ್ಲಿ ಕೊರೋನ ವೈರಸ್ ರೋಗಿಗಳನ್ನು ಇರಿಸಲಾಗಿರುವ ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿ ಬಂಧನ ಕೇಂದ್ರಗಳಿಗಿಂತಲೂ ಕಳಪೆಯಾಗಿದೆ ಎಂದು ಹೇಳಿಕೆ ನೀಡಿದ್ದ ಆರೋಪದಲ್ಲಿ ಅಸ್ಸಾಂನ ಶಾಸಕ ಅನೀಮುಲ್ ಇಸ್ಲಾಂರನ್ನು ಬಂಧಿಸಲಾಗಿದೆ.

ಅಸ್ಸಾಂನಲ್ಲಿರುವ ಕೊರೋನ ವೈರಸ್ ಕ್ವಾರಂಟೈನ್ ಕೇಂದ್ರಗಳು ಅಪಾಯಕಾರಿಯಾಗಿದ್ದು ಅಕ್ರಮ ವಲಸಿಗರನ್ನು ಇರಿಸುವ ಬಂಧನ ಕೇಂದ್ರಗಳಿಗಿಂತಲೂ ಕಳಪೆಯಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಶಾಸಕ ಅನೀಮುಲ್ ಇಸ್ಲಾಂ ಹಾಗೂ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಮಂಗಳವಾರ ಬಂಧಿಸಲಾಗಿದೆ.

ಈ ಬೆಳವಣಿಗೆಯ ಬಗ್ಗೆ ವಿಧಾನಸಭೆಯ ಸ್ಪೀಕರ್‌ಗೆ ಮಾಹಿತಿ ನೀಡಲಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮುಸ್ಲಿಮರ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳಿರುವವರಿಗೆ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಆರೋಗ್ಯವಂತರನ್ನೂ ಕೊರೋನ ಸೋಂಕಿತರು ಎಂದು ಬಿಂಬಿಸಿ ಇಂಜೆಕ್ಷನ್ ನೀಡಲಾಗುತ್ತಿದೆ ಎಂದು ಶಾಸಕರು ಆರೋಪಿಸಿರುವ ವೀಡಿಯೊ ವೈರಲ್ ಆಗಿದೆ. ಅಸ್ಸಾಂನಲ್ಲಿ 26 ಜನರಲ್ಲಿ ಕೊರೋನ ಸೋಂಕು ದೃಢಪಟಿದ್ದು, ಇವರಲ್ಲಿ 25 ಜನ ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News