ಕೊರೋನ ವೈರಸ್ : ಒಂದು ವರ್ಷದ ಮಗು ಸೇರಿ 165 ಮಂದಿ ಮೃತ್ಯು

Update: 2020-04-08 03:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಕೇವಲ ಐದು ದಿನಗಳಲ್ಲಿ ದ್ವಿಗುಣಗೊಂಡಿದ್ದು, ಒಟ್ಟು ಸಂಖ್ಯೆ 5000ದ ಗಡಿ ದಾಟಿದೆ. ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 165ನ್ನು ತಲುಪಿದೆ. ದೇಶದಲ್ಲಿ ಒಟ್ಟು 5325 ಮಂದಿಗೆ ಸೋಂಕು ತಗುಲಿದೆ ಎನ್ನುವುದು ರಾಜ್ಯಗಳಿಂದ ಬಂದ ಅಂಕಿ ಅಂಶಗಳನ್ನು ಕ್ರೋಢೀಕರಿಸಿದಾಗ ದೃಢಪಟ್ಟಿದೆ.

ಮಂಗಳವಾರ ಒಂದೇ ದಿನ 568 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 150 ಪ್ರಕರಣಗಳು ದಾಖಲಾಗಿದ್ದು, ಅಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ.

ಮಂಗಳವಾರ ದೇಶಾದ್ಯಂತ 25 ಸಾವು ಸಂಭವಿಸಿದ್ದು, ಮೃತಪಟ್ಟವರಲ್ಲಿ ಹದಿನಾಲ್ಕು ತಿಂಗಳ ಮಗು ಸೇರಿದೆ. ಗುಜರಾತ್‌ನ ಜಾಮ್‌ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದ್ದು, ದೇಶದಲ್ಲಿ ಈ ಸೋಂಕಿಗೆ ಬಲಿಯಾದ ಅತ್ಯಂತ ಕಿರಿಯ ಮಗು ಎನಿಸಿಕೊಂಡಿದೆ.

ದೆಹಲಿಯಲ್ಲಿ ಒಟ್ಟು 576 ಪ್ರಕರಣಗಳು ದೃಢಪಟ್ಟಿದ್ದು, ಒಂಬತ್ತು ಸಾವು ಸಂಭವಿಸಿದೆ. ಮಂಗಳವಾರ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 35 ರೋಗಿಗಳಿಗೆ ಐಸಿಯು ಬೆಂಬಲ ಅಗತ್ಯವಾಗಿದ್ದು, 27 ಮಂದಿ ಕೃತಕ ಆಮ್ಲಜನಕ ವ್ಯವಸ್ಥೆಯಲ್ಲಿದ್ದಾರೆ.

ಜಾಮ್‌ನಗರದಲ್ಲಿ ಮೃತಪಟ್ಟ ಮಗುವಿಗೆ ಸೋಂಕು ದೃಢಪಟ್ಟ ದಿನದಿಂದ ಅಂದರೆ ಎ 5ರಿಂದ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಮಗುವಿನ ಪೋಷಕರು ಕೂಲಿಕಾರ್ಮಿಕರಾಗಿದ್ದು, ಇಬ್ಬರಿಗೂ ಸೋಂಕು ಇಲ್ಲ ಎನ್ನುವುದು ದೃಢಪಟ್ಟಿದೆ. ಮಗುವಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ತೆಲಂಗಾಣದಲ್ಲಿ 23 ತಿಂಗಳ ಮಗು ಸೇರಿದಂತೆ 40 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 404ನ್ನು ತಲುಪಿದೆ. ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ ಮೂರು ಸಾವು ಸಂಭವಿಸಿದ್ದು, ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 16 ಆಗಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ ಒಟ್ಟು 12 ಮಂದಿ ಮೃತಪಟ್ಟಿದ್ದು, ಒಟ್ಟು 64 ಮಂದಿಯನ್ನು ಸೋಂಕು ಬಲಿ ಪಡೆದಂತಾಗಿದೆ. ಮುಂಬೈನಲ್ಲಿ ಆರು ಮಂದಿ, ಪುಣೆಯಲ್ಲಿ ಮೂವರು, ನಾಗ್ಪುರ, ಸತಾರ ಮತ್ತು ಮೀರಾ ಭಯಂದರ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ದೇಶದಲ್ಲಿ ಸಂಭವಿಸಿದ ಒಟ್ಟು ಕೊರೋನಾ ಸಾವಿನ ಸಂಖ್ಯೆಯ ಪೈಕಿ ಶೇಕಡ 40ರಷ್ಟು ಮಂದಿ ಮಹಾರಾಷ್ಟ್ರದಲ್ಲೇ ಮೃತಪಟ್ಟಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News