ಬೆಳಗುತ್ತಿರುವ ಹಣತೆಗಳೂ ಆರುತ್ತಿರುವ ದೀಪಗಳೂ

Update: 2020-04-08 05:34 GMT

ರವಿವಾರ ರಾತ್ರಿ ಹಣತೆ ಹಚ್ಚಿದ್ದೇವೆ ಆದರೆ ಇಂದು ನಮ್ಮ ಮುಂದೆ ನಂದಿ ಹೋಗುತ್ತಿರುವ ದೀಪಗಳು ಹೆಚ್ಚಾಗುತ್ತಿವೆ. ನಮ್ಮ ಐಕ್ಯಮತ್ಯ ಪ್ರದರ್ಶಿಸಿದ್ದೇವೆ. ಆದರೆ ನಮ್ಮ ನಡುವಿನ ಜನಸಮುದಾಯಗಳ ಬದುಕು ಅತಂತ್ರವಾಗುತ್ತಿರುವುದನ್ನು ನಾವೇ ಹಚ್ಚಿದ ಹಣತೆಯ ದೀಪಗಳ ಮೂಲಕ ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ದೃಷ್ಟಿ ಮಂದವಾಗಿಲ್ಲ, ಮಿದುಳು ನಿಷ್ಕ್ರಿಯವಾಗಿಲ್ಲ ಆದರೆ ಪರದೆಗಳು ಹೆಚ್ಚಾಗುತ್ತಿವೆ. ಈ ಪರದೆಗಳನ್ನು ಪಕ್ಕಕ್ಕೆ ಸರಿಸಿ ಮುನ್ನಡೆದರೆ ‘ಬದುಕೋಣ ಬದುಕಿಸೋಣ’ ಎನ್ನುತ್ತಾ ಮುನ್ನಡೆಯಬಹುದು.

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ದೇಶ ಸ್ಪಂದಿಸಿದೆ. ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ವಿದ್ಯುದೀಪವನ್ನು ಆರಿಸಿ, ದೀಪ ಹಚ್ಚುವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದೇ ಭಾವಿಸೋಣ. ಏಕೆಂದರೆ ನಮ್ಮ ಮಾಹಿತಿ ಸಂಗ್ರಹದ ವ್ಯಸನ ನಗರ ಪಟ್ಟಣಗಳನ್ನು ದಾಟಿ ಹೋಗಲು ಬಿಡುವುದಿಲ್ಲ. ದೇಶದ ಲಕ್ಷಾಂತರ ಗ್ರಾಮಗಳಲ್ಲಿ ಕೊರೋನ ಎಷ್ಟು ಹರಡಿದೆ ಎನ್ನುವ ಮಾಹಿತಿಯೇ ಲಭ್ಯವಾಗುತ್ತಿಲ್ಲ, ಇನ್ನು ಎಷ್ಟು ಜನ ದೀಪ ಹಚ್ಚಿದ್ದಾರೆ ಎಂದು ಹೇಗೆ ತಿಳಿಯುವುದು. ಸಂವಹನ ಮತ್ತು ಸಂಪರ್ಕ ತಂತ್ರಜ್ಞಾನ ಎಲ್ಲಿಯವರೆಗೆ ವ್ಯಾಪಿಸುವುದೋ, ಎಷ್ಟು ಜನರನ್ನು ತಲುಪುವುದೋ ಅಷ್ಟನ್ನೇ ನಮ್ಮ ಸಾಫಲ್ಯ ವೈಫಲ್ಯಗಳ ಮಾಪನ ಎಂದು ಪರಿಗಣಿಸಲು ನಾವು ಸಿದ್ಧರಾಗಿಬಿಟ್ಟಿದ್ದೇವೆ.

ಹಾಗಾಗಿ ಇಡೀ ದೇಶವೇ ದೀಪ ಹಚ್ಚಿದೆ, 130 ಕೋಟಿ ದೀಪ ಬೆಳಗಿದೆ ಎಂಬ ಸದ್ಭಾವನೆಯಲ್ಲಿ ಮುನ್ನಡೆಯೋಣ. ಇದು ದೇಶದ ಸಮಸ್ತ ಜನತೆಯಲ್ಲಿ ಒಗ್ಗಟ್ಟಿನಿಂದ ಹೋರಾಡುವ ಭಾವನೆಯನ್ನು ಮೂಡಿಸಿದೆ ಎನ್ನುವುದಾದರೆ ಅಡ್ಡಿಯಿಲ್ಲ. ಹಾಗೆಯೇ 48 ಗಂಟೆಗಳ ಅವಧಿಯಲ್ಲಿ ಭಾರತದ (ವಿಶೇಷವಾಗಿ ಕರ್ನಾಟಕದ) ವಿದ್ಯುನ್ಮಾನ ಮಾಧ್ಯಮಗಳು ಭಾರತವನ್ನು ಅಜ್ಞಾನದ ಕೂಪ ಎಂದು ನಿರೂಪಿಸುವಲ್ಲಿ ಯಶಸ್ವಿಯಾಗಿರುವುದನ್ನೂ ಮರೆಯುವುದು ಬೇಡ. ಐಕಮತ್ಯದ ಸಂದೇಶಕ್ಕೆ ಮೌಢ್ಯದ ಲೇಪನ ನೀಡುವ ಮೂಲಕ ನಮ್ಮ ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಜ್ಞಾನ ದೀಪವನ್ನು ನಂದಿಸಿ ಮೌಢ್ಯದ ಕಿಡಿಯನ್ನು ಹೊತ್ತಿಸಿದ್ದಾರೆ. ಇದು ಭಾರತವನ್ನು ದಹಿಸುವುದೋ, ಸಮರ್ಥವಾಗಿ ಗ್ರಹಿಸುವುದೋ ಕಾದು ನೋಡೋಣ. ಈಗ ನಮ್ಮ ಮುಂದಿರುವುದು ಕೊರೋನ.

ಕಳೆದ ಮೂರು ದಿನಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ 3,000ದಷ್ಟು ಏರಿಕೆಯಾಗಿರುವುದು ಆತಂಕಕಾರಿ ವಿಚಾರ. ನಿಝಾಮುದ್ದಿನ್ ಜಮಾಅತ್ ಇದರಲ್ಲಿ 1,000ಕ್ಕೂ ಹೆಚ್ಚು ಜನರನ್ನು ಕೊಡುಗೆಯಾಗಿ ನೀಡಿರುವುದೂ ಸತ್ಯ. ಆದರೆ ಇದನ್ನು ಮೌಢ್ಯ ಮತ್ತು ಮತಧಾರ್ಮಿಕ ಆಚರಣೆಗಳ ಚೌಕಟ್ಟಿನಲ್ಲಿಟ್ಟು ನೋಡೋಣ. 1,500 ಜನರನ್ನು ಸೇರಿಸಿ ತಿಥಿ ಮಾಡಿದ ವ್ಯಕ್ತಿ ಈಗ ಮತ್ತೊಂದು ಅವಾಂತರ ಸೃಷ್ಟಿಸುತ್ತಿದ್ದಾನೆ. ಬಿಲದಿಂದ ಇನ್ನೂ ಅನೇಕ ಹೆಗ್ಗಣಗಳು ಹೊರಬರಬೇಕಿದೆ. ಏಕೆಂದರೆ ಈ ರೀತಿಯ ಜನದಟ್ಟಣೆ ಇರುವ ಅನೇಕ ಕಾರ್ಯಕ್ರಮಗಳನ್ನು ಕಳೆದ 65 ದಿನಗಳಲ್ಲಿ ನೋಡಿದ್ದೇವೆ. ದೇಹಕ್ಕೆ ನಾವು ಅಂಟಿಸಿಕೊಂಡಿರುವ ಮತೀಯ ಅಸ್ಮಿತೆಯ ಲೇಪನಗಳನ್ನು ಅಳಿಸಲಾಗದಿದ್ದರೆ ಬೇಡ, ಕಣ್ಣುಗಳನ್ನಾದರೂ ಈ ಸೋಂಕಿನಿಂದ ದೂರ ಇಟ್ಟು ನಮ್ಮ ಮುಂದಿನ ಸವಾಲುಗಳತ್ತ ನೋಡೋಣ. ಕೊರೋನ ಹೀಗೇ ಹೇಳುತ್ತದೆ ಅಲ್ಲವೇ ?

ಭಾರತದ ಎಲ್ಲ ರಾಜ್ಯಗಳೂ ಈಗ ಎದುರಿಸುತ್ತಿರುವ ಒಂದು ಸಮಸ್ಯೆ ಎಂದರೆ ಕೊರೋನ ಪೀಡಿತರ ನಿಯಂತ್ರಣ, ತಪಾಸಣೆ ಮತ್ತು ಜನಸಂದಣಿಯ ನಿಯಂತ್ರಣ. ಯುಗಾದಿ, ವರ್ಷತೊಡಕು, ಮಾಂಸ ಮಾರಾಟ, ರಾಮನವಮಿ ಹೀಗೆ ಹಲವು ಸೂಕ್ಷ್ಮವಿಚಾರಗಳು ಕೊರೋನ ವೈರಾಣುವಿನ ಅಪಾಯವನ್ನು ಗ್ರಹಿಸಲು ಅಡ್ಡಗೋಡೆಗಳಾಗಿದ್ದನ್ನು ಕಂಡಿದ್ದೇವೆ. ‘‘ ನಮ್ಮ ಜನರಿಗೆ ಬುದ್ಧಿ ಬರುವುದಿಲ್ಲ ’’ ಎಂದು ಕನ್ನಡ ಮಾಧ್ಯಮಗಳು ಎಷ್ಟೇ ಹೇಳಿದರೂ ಜನರು ಬುದ್ಧಿ ಕಲಿಯುತ್ತಿಲ್ಲ. ಇಲ್ಲಿ ಬುದ್ಧಿ ಕಲಿಯಬೇಕಿರುವುದು ಯಾರು ? ನಿಜ, ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಆರೋಗ್ಯ ಸೇವೆಯನ್ನು ಹಳ್ಳಿಹಳ್ಳಿಗೂ ವಿಸ್ತರಿಸಿದೆ. ಆರೋಗ್ಯ ಸೇವಾ ಕಾರ್ಯಕರ್ತರು ತಮ್ಮ ಜೀವರಕ್ಷಣೆಯನ್ನೂ ಲೆಕ್ಕಿಸದೆ ಜನರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಇದು ಅನಗತ್ಯ ಎನಿಸಿದರೂ ಹೇಳಲೇಬೇಕಾದ ಒಂದು ಸಂಗತಿ ಎಂದರೆ, ಕೊರೋನ ಇರಲಿ ಇಲ್ಲದಿರಲಿ, ಭಾರತದಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ನೆಹರೂ ಕಾರಣವೋ, ಮೋದಿ ಕಾರಣವೋ, 70 ವರ್ಷವೋ, 6 ವರ್ಷವೋ ಎಂದು ಗುದ್ದಾಡುವ ಬದಲು, ಪ್ರಭುತ್ವದ ನೀತಿಯನ್ನು (state police) ಅವಲೋಕನ ಮಾಡುವುದು ಒಳಿತು. ದೇಶದ ಲಕ್ಷಾಂತರ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿರುವುದನ್ನು ಎಲ್ಲರೂ ಗಮನಿಸಿರುತ್ತೇವೆ. ಹಾಗೆಯೇ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇರುತ್ತದೆ.

 ಇದನ್ನು ಸ್ಥಾಪಿಸಲು ನೆರವಾಗಿದ್ದು ಸ್ವಾತಂತ್ರ್ಯೋತ್ತರ ಭಾರತದ ಜನಮುಖಿ ಆಡಳಿತ ವ್ಯವಸ್ಥೆ ಮತ್ತು ನೀತಿಗಳು. ಕಾಲಕ್ರಮೇಣ ಈ ನೀತಿಗಳು ಹಾಳೆಯ ಮೇಲಿನ ಅಕ್ಷರಗಳಾಗಿ ಉಳಿದುಬಿಟ್ಟಿದ್ದರಿಂದ ಆರೋಗ್ಯ ಕೇಂದ್ರದ ಕಟ್ಟಡಗಳು ಶಿಥಿಲವಾಗತೊಡಗಿದವು, ಜನಸಮುದಾಯಗಳ ಆರೋಗ್ಯ ಕಾಳಜಿ ಯುದ್ಧ ಕಾಲದ ಶಸ್ತ್ರಾಭ್ಯಾಸಕ್ಕೆ ಸೀಮಿತವಾಯಿತು. ವೈಜ್ಞಾನಿಕ ಆವಿಷ್ಕಾರದ ಪರಿಣಾಮ ಹಲವು ಲಸಿಕೆಗಳು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ನೆರವಾಗಿದ್ದು, ನಮ್ಮ ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಗೆ ಕಾರಣವೂ ಆಯಿತು. ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡುವ ಪರಂಪರೆಗೆ ಭಾರತದ ಆರೋಗ್ಯ ವ್ಯವಸ್ಥೆ ಒಗ್ಗಿಹೋಯಿತು. ಈ ನಡುವೆ, ಆರೋಗ್ಯ ಮತ್ತು ಶಿಕ್ಷಣ ಸರಕಾರದ ಹೊಣೆಯಲ್ಲ ಎಂಬ ಜಾಗತಿಕ ನೀತಿ ಭಾರತವನ್ನೂ ಆಕ್ರಮಿಸಿದ್ದರಿಂದ ಆರೋಗ್ಯ ಸೇವೆ ಕಾರ್ಪೊರೇಟ್ ಉದ್ಯಮದ ಪಾಲಾಗಿದ್ದನ್ನೂ ಗಮನಿಸುತ್ತಿದ್ದೇವೆ.

‘‘ನಿಮಗೆ ಎಂತಹುದೇ ರೋಗ ಬರಲಿ ಚಿಕಿತ್ಸೆಗೆ ಐದು ಲಕ್ಷ ರೂ. ವಿಮೆ ನೀಡುತ್ತೇವೆ ’’ ಎಂದು ಘೋಷಿಸುವ ಮೂಲಕ, ರೋಗವನ್ನು ತಡೆಗಟ್ಟಲು ನಾವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರಕಾರ ನೇರವಾಗಿ ಹೇಳಿದೆ. ಆದರೂ ನಾವು ವಿಮೆಯ ಭ್ರಮೆಯಲ್ಲಿ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಕೊರೋನ ನಮ್ಮ ಇತಿಮಿತಿಗಳನ್ನು ಒಮ್ಮೆಲೇ ಹೊರಹಾಕಿಬಿಟ್ಟಿದೆ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂಬ ಪರಿಜ್ಞಾನ ಜನಸಾಮಾನ್ಯರಲ್ಲಿ ಇಲ್ಲ ಎನ್ನುವುದಕ್ಕಿಂತಲೂ, ಈ ಪರಿಜ್ಞಾನ ಮೂಡಿಸುವಲ್ಲಿ ಸರಕಾರಗಳು ಸಾಕಷ್ಟು ಶ್ರಮ ವಹಿಸಿಲ್ಲ ಎನ್ನುವುದನ್ನು ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಿದೆ.

   ಈ ಜ್ಞಾನದ ಕೊರತೆಯೇ ಆರೋಗ್ಯ ಸೇವೆಯ ಕಾರ್ಯಕರ್ತರು ಮತ್ತು ಸಾಮಾನ್ಯ ಜನರ ನಡುವಿನ ಅಂತರವನ್ನು ಹೆಚ್ಚಿಸುತ್ತಿದೆ. ಕೇಂದ್ರ ಸರಕಾರದ ಆಶಾ ಯೋಜನೆ ಇದಕ್ಕೊಂದು ಸ್ಪಷ್ಟ ಉದಾಹರಣೆ. ಸಮುದಾಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ನಿರ್ದಿಷ್ಟ ಪ್ರದೇಶದ ಜನಸಮುದಾಯಗಳ ಒಳಗಿನಿಂದಲೇ ಆಯ್ಕೆ ಮಾಡಿ ನಿಯೋಜಿಸಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕ್ರಮೇಣ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಆರಂಭಿಸಿದ್ದು ನಮ್ಮ ಆಡಳಿತ ವ್ಯವಸ್ಥೆಯ ಮಹಾಪ್ರಮಾದ ಎನ್ನುವುದು ಈಗ ಅರ್ಥವಾಗುತ್ತಿದೆ. ಕೊರೋನ ಸೋಂಕಿತರು ಆರೋಗ್ಯ ಸೇವಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುತ್ತಿರುವುದಕ್ಕೆ ಮೂಲ ಕಾರಣ, ಈ ಜನತೆಗೆೆ ಕೊರೋನದಿಂದ ಉಂಟಾಗುವ ಅಪಾಯಗಳ ತಿಳುವಳಿಕೆ ಇಲ್ಲ. ವಲಸೆ ಕಾರ್ಮಿಕರು, ತಬ್ಲೀಗಿ ಸಭೆಗೆ ಹೋದವರನ್ನು ಇಲ್ಲಿ ಅಪರಾಧಿಗಳಂತೆ ಕಾಣುವುದಕ್ಕಿಂತಲೂ, ನಮ್ಮ ಸಮಾಜದಲ್ಲಿನ ನ್ಯೂನತೆಯ ಸಂಕೇತ ಎಂದು ಭಾವಿಸಿದರೆ, ಬಹುಶಃ ಮುಂದಿನ ದಿನಗಳಲ್ಲಿ ನೆರವಾಗಬಹುದು.

ಜನಸಮುದಾಯಗಳಲ್ಲಿ ಸಾರ್ವಜನಿಕ ಮತ್ತು ಸಾಮುದಾಯಿಕ ಆರೋಗ್ಯ ರಕ್ಷಣೆಯ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ ವಿಫಲವಾಗಿರುವುದರಿಂದಲೇ ಇಂದು ನಗರ ಪ್ರದೇಶಗಳ ಸುಶಿಕ್ಷಿತರೂ ಪೊಲೀಸರ ಲಾಠಿ ರುಚಿ ನೋಡುತ್ತಿದ್ದಾರೆ. ‘ನಾವು ದಿನಾಲೂ ಸ್ನಾನ ಮಾಡ್ತೀವಿ ನಮಗ್ಯಾಕೆ ಬರುತ್ತೆ ಆ ರೋಗ’ ಎನ್ನುವ ಧೋರಣೆಯನ್ನು ಇಂದಿಗೂ ಮೈಗೂಡಿಸಿಕೊಂಡಿರುವ ಮಧ್ಯಮ ವರ್ಗಗಳಲ್ಲೂ ಸಾಮುದಾಯಿಕ ಆರೋಗ್ಯ ಕಾಳಜಿ ಇಲ್ಲದಿರುವುದನ್ನು ಕೊರೋನ ಸಾಬೀತುಪಡಿಸಿದೆ. ಹಾಗಾಗಿಯೇ ನಗರ ಪ್ರದೇಶಗಳಲ್ಲೂ ಮುಖಗವುಸು ಧರಿಸದ, ದೈಹಿಕ ಅಂತರ ಕಾಪಾಡಿಕೊಳ್ಳದ, ಪೊಲೀಸರೊಡನೆ ವಾಗ್ವಾದ ನಡೆಸುವ, ಲಾಠಿ ಏಟು ತಿನ್ನುವ ಜನರನ್ನು ಕಾಣುತ್ತಿದ್ದೇವೆ.

ಕೊರೋನ ಈಗ ನಗರಗಳನ್ನು ದಾಟಿ ಗ್ರಾಮಗಳನ್ನು , ನಗರಗಳ ಅಂಚಿನಲ್ಲಿರುವ ಕೊಳೆಗೇರಿಗಳನ್ನು ತಲುಪುತ್ತಿದೆ. ಮುಂಬೈಯ ಧಾರಾವಿ ಎಷ್ಟು ಜನದಟ್ಟಣೆಯಿಂದ ಕೂಡಿದೆ, ಅಲ್ಲಿ ಎಷ್ಟು ಶೀಘ್ರವಾಗಿ ಇಂತಹ ಸೋಂಕು ಹರಡಬಹುದು ಎಂಬ ಪರಿಜ್ಞಾನ ಇದ್ದಿದ್ದರೆ ಮೊದಲ ದಿನದಿಂದಲೇ ಮಹಾರಾಷ್ಟ್ರ ಸರಕಾರ ಅಲ್ಲಿ ಜನಜಾಗೃತಿಯ ಕ್ರಮಗಳನ್ನು, ಸೋಂಕು ತಡೆಗಟ್ಟುವ ವಿಧಾನಗಳನ್ನು ಅನುಸರಿಸುತ್ತಿತ್ತು. ಇದು ಒಂದು ಉದಾಹರಣೆಯಷ್ಟೆ. ದೇಶದ ಎಲ್ಲ ಮಹಾನಗರಗಳಲ್ಲೂ ಇರುವ ಈ ಕೊಳೆಗೇರಿಗಳಲ್ಲಿ ವಾಸಿಸುವವರು ಇನ್ನು ಹಲವು ತಿಂಗಳ ಕಾಲ ಉಸಿರು ಬಿಗಿ ಹಿಡಿದು ಬದುಕುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ನಮ್ಮ ಸರಕಾರಗಳು ಇನ್ನೂ ಅತ್ತಕಡೆ ಕಣ್ಣು ಹಾಯಿಸಿಲ್ಲ.

 ಗ್ರಾಮೀಣ ಮತ್ತು ಅಲಕ್ಷಿತ ಜನಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದೆಂದರೆ, ‘ಗುಮ್ಮ ಬರುತ್ತೆ ಹುಷಾರ್’ ಎಂದು ಹೆದರಿಸುವುದಲ್ಲ. ‘ದೀಪ ಹಚ್ಚಿದರೆ ವೈರಾಣು ಸಾಯುತ್ತದೆ’ ಎಂದು ನಂಬಿಸುವುದೂ ಅಲ್ಲ. ಈ ಜನ ಸಮುದಾಯಗಳಿಗೆ ಸೂಕ್ತ ರಕ್ಷಣಾ ಉಪಕರಣಗಳನ್ನು ಒದಗಿಸುವುದು, ಔಷಧಿ ಮತ್ತು ಲಸಿಕೆಗಳನ್ನು ಒದಗಿಸುವುದು, ಅ ಸಮುದಾಯದಿಂದಲೇ ಕೆಲವರನ್ನು ಆಯ್ಕೆ ಮಾಡಿ ಅವರ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವುದು ಇಂದಿನ ತುರ್ತು. ದುರಂತ ಎಂದರೆ ಈ ಸಂದರ್ಭದಲ್ಲೂ ನಮ್ಮಲ್ಲಿ ಮುಖಗವಸು ಲಭ್ಯವಾಗುತ್ತಿಲ್ಲ, ಆರೋಗ್ಯ ಸೇವಾ ಕಾರ್ಯಕರ್ತರೇ ರಕ್ಷಣಾ ಉಪಕರಣಗಳಿಲ್ಲದೆ ಅಪಾಯ ಎದುರಿಸುತ್ತಿದ್ದಾರೆ. ಯಾರನ್ನು ದೂಷಿಸುವುದು ?- ಚೀನಾ-ತಬ್ಲೀಗಿ ಸಭೆ-ನೆಹರೂ-ಗಾಂಧಿ-ಜಿಹಾದ್????

 ಭಾರತದ ಗ್ರಾಮೀಣ ಬದುಕಿನ ಚಿತ್ರಣವನ್ನು ಒಮ್ಮೆ ಗಮನಿಸಿದರೆ 20 ಹಳ್ಳಿಗಳಿಗೆ ಒಂದು ಆರೋಗ್ಯ ಕೇಂದ್ರ, ಒಬ್ಬ ವೈದ್ಯ, ಕೆಲವೇ ಶುಶ್ರೂಷಕಿಯರು ಇರುವುದನ್ನು ಇಂದಿಗೂ ಗಮನಿಸಬಹುದು. ಎಷ್ಟೋ ಹಳ್ಳಿಗಳಿಗೆ ಸಮುದಾಯ ಆರೋಗ್ಯ ಸೇವೆ ತಲುಪುತ್ತಲೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಈ ಗ್ರಾಮಗಳಿಗೆ ಕೊರೋನ ಹಬ್ಬುವುದಿಲ್ಲ ಎಂದು ಹೇಳಲಾಗುವುದಿಲ್ಲ. ಈ ಭೀತಿಯಿಂದಲೇ ಹಲವು ಕುಗ್ರಾಮಗಳ ಜನರು ‘ಕೊರೋನ ಸೋಂಕಿತರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್‌ಗಳನ್ನು ಇಟ್ಟಿದ್ದಾರೆ. ಇದನ್ನು ಗ್ರಾಮಸ್ಥರ ಕ್ರೌರ್ಯ ಎಂದೋ, ಅಮಾನವೀಯತೆ ಎಂದೋ ಭಾವಿಸಲಾಗುವುದಿಲ್ಲ. ನಮಗೇ ಇಲ್ಲದ ಸೌಲಭ್ಯವನ್ನು ಇವರಿಗೆಲ್ಲಿಂದ ತರುವುದು ಎನ್ನುವ ಆತಂಕ ಅವರನ್ನು ಕಾಡುತ್ತಿರುತ್ತದೆ. ತರಗೆಲೆ ತಿನ್ನುವವರ ಮನೆಯಲ್ಲಿ ಹಪ್ಪಳ ಕೇಳಿದಂತೆ ಅಲ್ಲವೇ ?

ಕೊರೋನ ಸಂದರ್ಭದಲ್ಲಿ ಭಾರತದ ಆಡಳಿತ ವ್ಯವಸ್ಥೆ ಇನ್ನೂ ಚುರುಕಾಗಬೇಕಿದೆ. ಮೈಸೂರಿನ ಶಾಸಕರು ಹೇಳಿದಂತೆ, ಮಾಧ್ಯಮಗಳ ಪಂಡಿತರು ಘೋಷಿಸಿದಂತೆ, ಮೌಢ್ಯಾಧಿಪತಿಗಳು ಆದೇಶಿಸಿದಂತೆ 130 ಕೋಟಿ ದೀಪಗಳು ಕೊರೋನ ವೈರಾಣುಗಳನ್ನು ಕೊಲ್ಲುವುದಿಲ್ಲ. ನಮ್ಮ ಜ್ಞಾನ ದೀಪಗಳನ್ನು ಬೆಳಗಿಸುತ್ತಲೇ ಇರಬೇಕಾದ್ದು ನಮ್ಮ ಆದ್ಯತೆಯಾಗಬೇಕಿದೆ. ಕೊರೋನ ವೈರಾಣು ಹರಡುತ್ತಿರುವಂತೆಲ್ಲಾ ಜನಜೀವನವೂ ಅಸ್ತವ್ಯಸ್ತವಾಗುತ್ತದೆ. ಕೋಟ್ಯಂತರ ವಲಸೆ ಕಾರ್ಮಿಕರನ್ನು ಎಷ್ಟು ದಿನ ಕೂಡಿಹಾಕಲು ಸಾಧ್ಯ ಎನ್ನುವುದನ್ನೂ ಯೋಚಿಸಬೇಕಲ್ಲವೇ ? ಹೀಗೆ ಕೂಡಿ ಹಾಕಿದವರಲ್ಲಿ ಮಡುಗಟ್ಟಿದ ಆಕ್ರೋಶ ಹೊರಹೊಮ್ಮಿದರೆ, ಆರೋಗ್ಯ ಕಾರ್ಯಕರ್ತರು ಹಲ್ಲೆಗೊಳಗಾಗುತ್ತಾರೆ. ಇದು ಆಗುತ್ತಲೂ ಇದೆ. ದೇಶದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಜನತೆಗೆ ಆರೋಗ್ಯ ಸೇವೆ ಒದಗಿಸುವುದೇ ಅಲ್ಲದೆ, ಅವರಲ್ಲಿ ಇಂತಹ ಮಾರಣಾಂತಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಸಮುದಾಯ ಕೇಂದ್ರಿತ ಪ್ರಯತ್ನಗಳು ಅತ್ಯವಶ್ಯ.

ಕಳೆದ ಹಲವು ವರ್ಷಗಳಲ್ಲಿ ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರ ನಿರ್ಲಕ್ಷಕ್ಕೊಳಗಾಗುತ್ತಿರುವಂತೆಯೇ,ಪ್ರಾಥಮಿಕ ಆರೋಗ್ಯ ಸೇವೆಯೂ ಕಾರ್ಪೊರೇಟ್ ಉದ್ಯಮಿಗಳ ಪಾಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ನಡುವಿನ ವಿಶ್ವಾಸ ಕಡಿಮೆಯಾಗುತ್ತಿದೆ. ಈ ವಿಶ್ವಾಸವನ್ನು ಮರಳಿ ಗಳಿಸುವುದಕ್ಕೆ ಇನ್ನು ದಶಕಗಳೇ ಬೇಕಾಗಬಹುದು. ಆದರೆ ಈ ಹೊತ್ತಿನಲ್ಲಿ ಇದು ಅತ್ಯವಶ್ಯ. ಹೇಗೆ ಎನ್ನುವುದು ನಮ್ಮ ಮುಂದಿರುವ ಸವಾಲು. ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದು, ಸಮುದಾಯದ ಜನರನ್ನು ಒಳಗೊಂಡ ಕಾರ್ಯಪಡೆಗಳನ್ನು ರೂಪಿಸುವುದು, ಮೂಲ ಸೌಕರ್ಯಗಳನ್ನು ಭದ್ರಪಡಿಸುವುದು, ರಕ್ಷಣಾ ಉಪಕರಣಗಳನ್ನು ಸಮರೋಪಾದಿಯಲ್ಲಿ ಉತ್ಪಾದಿಸುವುದು ಇವೆಲ್ಲವೂ ಪರಸ್ಪರ ಪೂರಕವಾಗಿ ನಡೆದರೆ ಮಾತ್ರವೇ ಕೊರೋನ ವಿರುದ್ಧ ಹೋರಾಡಲು ಸಾಧ್ಯ.

 ರವಿವಾರ ರಾತ್ರಿ ಹಣತೆ ಹಚ್ಚಿದ್ದೇವೆ ಆದರೆ ಇಂದು ನಮ್ಮ ಮುಂದೆ ನಂದಿ ಹೋಗುತ್ತಿರುವ ದೀಪಗಳು ಹೆಚ್ಚಾಗುತ್ತಿವೆ. ನಮ್ಮ ಐಕ್ಯಮತ್ಯ ಪ್ರದರ್ಶಿಸಿದ್ದೇವೆ. ಆದರೆ ನಮ್ಮ ನಡುವಿನ ಜನಸಮುದಾಯಗಳ ಬದುಕು ಅತಂತ್ರವಾಗುತ್ತಿರುವುದನ್ನು ನಾವೇ ಹಚ್ಚಿದ ಹಣತೆಯ ದೀಪಗಳ ಮೂಲಕ ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ದೃಷ್ಟಿ ಮಂದವಾಗಿಲ್ಲ, ಮಿದುಳು ನಿಷ್ಕ್ರಿಯವಾಗಿಲ್ಲ ಆದರೆ ಪರದೆಗಳು ಹೆಚ್ಚಾಗುತ್ತಿವೆ. ಈ ಪರದೆಗಳನ್ನು ಪಕ್ಕಕ್ಕೆ ಸರಿಸಿ ಮುನ್ನಡೆದರೆ ‘ಬದುಕೋಣ ಬದುಕಿಸೋಣ’ ಎನ್ನುತ್ತಾ ಮುನ್ನಡೆಯಬಹುದು. ಕೊರೋನ ಈ ನಿಟ್ಟಿನಲ್ಲಿ ನೆರವಾಗಬಹುದೇ? ಯೋಚಿಸಿ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News