ದೇಶದ ಎಲ್ಲಾ ಜನರಿಗೆ ಕೋವಿಡ್-19 ಪರೀಕ್ಷಾ ಸೌಲಭ್ಯಗಳನ್ನು ಉಚಿತಗೊಳಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2020-04-08 16:26 GMT

 ಹೊಸದಿಲ್ಲಿ,ಎ.8: ಖಾಸಗಿ ಲ್ಯಾಬ್‌ಗಳು ಕೊರೋನ ವೈರಸ್ ಸೋಂಕು ಪರೀಕ್ಷೆಗೆ ದುಬಾರಿ ಶುಲ್ಕವನ್ನು ವಿಧಿಸದಂತೆ ನೋಡಿಕೊಳ್ಳಲು ಬುಧವಾರ ಕೇಂದ್ರಕ್ಕೆ ನಿರ್ದೇಶ ನೀಡಿದ ಸರ್ವೋಚ್ಚ ನ್ಯಾಯಾಲಯವು,ನಾಗರಿಕರ ಮೇಲೆ ಪರೀಕ್ಷಾ ಶುಲ್ಕಗಳ ಹೊರೆ ಬೀಳದಿರಲು ಖಾಸಗಿ ಲ್ಯಾಬ್‌ಗಳಿಗೆ ಶುಲ್ಕವನ್ನು ಸರಕಾರವೇ ಭರಿಸುವ ವ್ಯವಸ್ಥೆಯನ್ನು ರೂಪಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿತು.

 ದೇಶದಲ್ಲಿಯ ಎಲ್ಲ ರೋಗಿಗಳಿಗೆ ಶುಲ್ಕರಹಿತ ಪರೀಕ್ಷಾ ಸೌಲಭ್ಯವನ್ನೊದಗಿಸುವಂತೆ ಕೇಂದ್ರ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶವನ್ನು ಕೋರಿ ನ್ಯಾಯವಾದಿ ಶಶಾಂಕದೇವ ಸುಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್.ರವೀಂದ್ರ ಭಟ್ ಅವರ ಪೀಠವು, ಕೊರೋನ ವೈರಸ್ ಪರೀಕ್ಷೆಯನ್ನು ನಡೆಸುವ ಖಾಸಗಿ ಲ್ಯಾಬ್‌ಗಳು ದುಬಾರಿ ಶುಲ್ಕವನ್ನು ವಿಧಿಸದಂತೆ ವ್ಯವಸ್ಥೆಯೊಂದನ್ನು ಕೇಂದ್ರವು ರೂಪಿಸಬೇಕು ಎಂದು ಹೇಳಿತು.

ಕೊರೋನ ವೈರಸ್ ಪರೀಕ್ಷೆಗಾಗಿ ಖಾಸಗಿ ಲ್ಯಾಬ್‌ಗಳು ಜನರಿಂದ ಶುಲ್ಕವನ್ನು ವಸೂಲು ಮಾಡಲು ಅವಕಾಶ ನೀಡಬೇಡಿ. ಪರೀಕ್ಷೆಗಳಿಗೆ ಸರಕಾರವೇ ಶುಲ್ಕವನ್ನು ಭರಿಸುವ ವ್ಯವಸ್ಥೆಯೊಂದನ್ನು ರೂಪಿಸಬಹುದಾಗಿದೆ ಎಂದು ನ್ಯಾ.ಭೂಷಣ ಹೇಳಿದರು.

ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ನ್ಯಾಯಾಲಯದ ನಿರ್ದೇಶವನ್ನು ಸರಕಾರವು ಪರಿಶೀಲಿಸಲಿದೆ ಮತ್ತು ಪರಿಹಾರವನ್ನು ಕಂಡುಕೊಳ್ಳಲಿದೆ ಎಂದು ಹೇಳಿದರು.

ಹಾಲಿ ಖಾಸಗಿ ಲ್ಯಾಬ್‌ಗಳಲ್ಲಿ ಕೊರೋನ ವೈರಸ್ ಪರೀಕ್ಷಾ ಶುಲ್ಕಕ್ಕೆ 4,500 ರೂ.ಗಳ ಮಿತಿಯನ್ನು ಹೇರಲಾಗಿದೆ. ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸಲು ಸರಕಾರವು ತನ್ನಿಂದ ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ. 118 ಲ್ಯಾಬ್‌ಗಳು ಪ್ರತಿದಿನ 5,000 ಪರೀಕ್ಷೆಗಳನ್ನು ನಡೆಸುತ್ತಿವೆ. ಇದು ಸಾಕಾಗುವುದಿಲ್ಲ, ಹೀಗಾಗಿ 47 ಖಾಸಗಿ ಲ್ಯಾಬ್ ಸರಣಿಗಳಿಗೂ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮೆಹ್ತಾ ತಿಳಿಸಿದರು.

ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಜನರ ಬವಣೆಗೆ ಅಧಿಕಾರಿಗಳು ಸ್ಪಂದಿಸುತ್ತ್ತಿಲ್ಲ ಎಂದು ಸುಧಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News