ಅನೌಪಚಾರಿಕ ವಲಯದಲ್ಲಿ ದುಡಿಯುವ 40 ಕೋಟಿ ಭಾರತೀಯರು ಬಡತನದ ಕೂಪಕ್ಕೆ: ವರದಿ

Update: 2020-04-08 16:48 GMT

ಹೊಸದಿಲ್ಲಿ,ಎ.8: ಕೊರೋನ ವೈರಸ್ ಬಿಕ್ಕಟ್ಟು ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 40 ಕೋಟಿ ಭಾರತೀಯರನ್ನು ಇನ್ನಷ್ಟು ಬಡತನಕ್ಕೆ ತಳ್ಳಬಹುದು ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮಂಗಳವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ಆತಂಕವನ್ನು ವ್ಯಕ್ತಪಡಿಸಿದೆ.

ಈ ಸಾಂಕ್ರಾಮಿಕ ಪಿಡುಗು ವರ್ಷದ ಉತ್ತರಾರ್ಧದಲ್ಲಿ 19.5 ಪೂರ್ಣಕಾಲಿಕ ಉದ್ಯೋಗಗಳನ್ನು ನಷ್ಟಗೊಳಿಸುವ ಸಾಧ್ಯತೆಯಿದೆ ಮತ್ತು ಕೊರೋನ ವೈರಸ್ ದ್ವಿತೀಯ ಮಹಾಯುದ್ಧದ ನಂತರ ಅತ್ಯಂತ ಕೆಟ್ಟ ಜಾಗತಿಕ ಬಿಕ್ಕಟ್ಟು ಆಗಿದೆ ಎಂದು ಅದು ಹೇಳಿದೆ.

ಭಾರತದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಅತ್ಯಂತ ಕಠಿಣವಾಗಿದೆ ಎಂದಿರುವ ವರದಿಯು,ಭಾರತದ ಶೇ.90ರಷ್ಟು ಕಾರ್ಮಿಕರು ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಅಂಗಡಿಗಳು ಮತ್ತು ಉದ್ಯಮಗಳ ಮುಚ್ಚುವಿಕೆಯಿಂದಾಗಿ ಹಲವಾರು ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ ಎಂದಿದೆ.

‘75 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಇದು ಅಂತರರಾಷ್ಟ್ರೀಯ ಸಹಕಾರಕ್ಕೆ ಅತ್ಯಂತ ದೊಡ್ಡ ಸತ್ವಪರೀಕ್ಷೆಯಾಗಿದೆ. ಒಂದು ದೇಶವು ವಿಫಲಗೊಂಡರೆ ನಾವೆಲ್ಲರೂ ವಿಫಲಗೊಳ್ಳುತ್ತೇವೆ. ನಮ್ಮ ಜಾಗತಿಕ ಸಮಾಜದ ವಿವಿಧ ವರ್ಗಗಳನ್ನು, ನಿರ್ದಿಷ್ಟವಾಗಿ ಅತ್ಯಂತ ದುರ್ಬಲರು ಮತ್ತು ಅಸಹಾಯಕ ಸ್ಥಿತಿಯಲ್ಲಿರುವವರಿಗೆ ನೆರವಾಗಲು ಮಾರ್ಗಗಳನ್ನು ನಾವು ಕಂಡುಕೊಳ್ಳಲೇಬೇಕು ’ಎಂದು ರೈಡರ್ ಹೇಳಿದ್ದಾರೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಕಾರ್ಮಿಕರು ಸಾಮಾನ್ಯವಾಗಿ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುವುದು ಮಾತ್ರವಲ್ಲ,ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ರಕ್ಷಣೆಯನ್ನು ಪಡೆಯುವ ಅವಕಾಶಗಳೂ ಅವರಿಗೆ ಸೀಮಿತವಾಗಿವೆ ಎಂದಿರುವ ಐಎಲ್‌ಒ ವರದಿಯು,ಸರಕಾರಗಳು ಸೂಕ್ತ ನೀತಿಗಳನ್ನು ರೂಪಿಸದಿದ್ದರೆ ಕಾರ್ಮಿಕರು ಇನ್ನಷ್ಟು ಬಡತನಕ್ಕೆ ಸಿಲುಕುತ್ತಾರೆ ಮತ್ತು ಲಾಕ್‌ಡೌನ್‌ಗಳು ತೆರವುಗೊಂಡ ಬಳಿಕ ತಮ್ಮ ಜೀವನೋಪಾಯವನ್ನು ಪುನಃ ಗಳಿಸುವುದು ಅವರಿಗೆ ಸವಾಲು ಆಗಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.

 ಸರಕಾರಗಳು ನೀತಿ ಕ್ರಮಗಳ ಮೂಲಕ ಕಾರ್ಮಿಕರ ಜೀವನೋಪಾಯಗಳನ್ನು ರಕ್ಷಿಸುವ ಜೊತೆಗೆ,ಇರುವ ಉದ್ಯೋಗ ಗಳನ್ನು ಉಳಿಸಿಕೊಳ್ಳಲು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಖಾಸಗಿ ಉದ್ಯಮಗಳನ್ನು ಉತ್ತೇಜಿಸಬೇಕು ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News