ಮೋದಿ, ಆದಿತ್ಯನಾಥ್ ವಿರುದ್ಧ ಟ್ವೀಟಿಸಿದ್ದ ಪತ್ರಕರ್ತನ ವಿರುದ್ಧ ಎಫ್‌ಐಆರ್ ದಾಖಲು

Update: 2020-04-08 14:55 GMT

 ಹೊಸದಿಲ್ಲಿ,ಎ.8: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕುರಿತು ಆಕ್ಷೇಪಾರ್ಹ ಟೀಕೆಗಳಿಗಾಗಿ ಪತ್ರಕರ್ತ ಪ್ರಶಾಂತ ಕನೋಜಿಯಾ ವಿರುದ್ಧ ಲಕ್ನೋ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕನೋಜಿಯಾ ಸುದ್ದಿ ಜಾಲತಾಣ ‘ದಿ ವೈರ್ ಹಿಂದಿ’ಯ ಮಾಜಿ ವರದಿಗಾರರಾಗಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕ ಶಶಾಂಕ ಶೇಖರ ಸಿಂಗ್ ಸಲ್ಲಿಸಿರುವ ದೂರಿನ ಮೇರೆಗೆ ಲಕ್ನೋದ ಆಶಿಯಾನಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನೋಜಿಯಾರ ಕೆಲವು ಟ್ವೀಟ್‌ಗಳು ಕೋಮು ದ್ವೇಷವನ್ನು ಹರಡಬಲ್ಲವು, ಜೊತೆಗೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತದ್ದಾಗಿವೆ ಎಂದೂ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಅವರು ದೂರಿನಲ್ಲಿ ಉಲ್ಲೇಖಿಸಿರುವ ಕೆಲವು ಟ್ವೀಟ್‌ಗಳು ಫೆಬ್ರವರಿಯಿಂದ ಮಾಡಿದ್ದಾಗಿವೆ.

2019,ಜೂನ್‌ನಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಆದಿತ್ಯನಾಥ್ ಕುರಿತು ಪೋಸ್ಟ್‌ಗಾಗಿ ಲಕ್ನೋ ಪೊಲೀಸರು ಕನೋಜಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ತನ್ಮಧ್ಯೆ,ದಿಲ್ಲಿ ನಿವಾಸಿಯಾಗಿರುವ ಕನೋಜಿಯಾ ವಿರುದ್ಧ ತಾವಿನ್ನೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

 ಕನೋಜಿಯಾರ ಬಂಧನವು ಅಕ್ರಮವಾಗಿದೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಜೂನ್,2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿತ್ತು. ಕನೋಜಿಯಾರ ಪತ್ನಿ ಜಗಿಶಾ ಅರೋರಾ ಅವರು ಜಾಮೀನು ಕೋರಿ ಮೊದಲು ಕೆಳ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ರಾಜ್ಯ ಸರಕಾರದ ವಾದವನ್ನೂ ಅದು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News