ಲಾಕ್‌ಡೌನ್ ಎಫೆಕ್ಟ್: ಮಗನಿಗಾಗಿ ಮಹಿಳೆಯಿಂದ 1400 ಕಿ.ಮೀ. ಸ್ಕೂಟರ್ ಸವಾರಿ!

Update: 2020-04-10 05:17 GMT

ಹೈದರಾಬಾದ್, ಎ.10: ದಿಢೀರ್ ಲಾಕ್‌ಡೌನ್ ಘೋಷಣೆಯಿಂದಾಗಿ ಪಕ್ಕದ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಗನನ್ನು ಸುರಕ್ಷಿತವಾಗಿ ಕರೆತರಲು ಮಹಿಳೆಯರೊಬ್ಬರು 1,400 ಕಿಲೋಮೀಟರ್ ಸ್ಕೂಟರ್ ಸವಾರಿ ಕೈಗೊಂಡ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.

ರಝಿಯಾ ಬೇಗಂ (48) ಪೊಲೀಸರ ಅನುಮತಿ ಪಡೆದು ಈ ಸಾಹಸಯಾತ್ರೆ ಕೈಗೊಂಡ ಮಹಿಳೆ. ಸೋಮವಾರ ಬೆಳಗ್ಗೆ ಒಬ್ಬಂಟಿಯಾಗಿ ನೆಲ್ಲೂರಿಗೆ ಸ್ಕೂಟರ್ ಚಲಾಯಿಸಿಕೊಂಡು ಹೋದ ಮಹಿಳೆ, ಬುಧವಾರ ಸಂಜೆ ನೆಲ್ಲೂರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಿರಿಯ ಮಗನೊಂದಿಗೆ ವಾಪಸ್ಸಾದರು.

ಸಣ್ಣ ದ್ವಿಚಕ್ರ ವಾಹನದಲ್ಲಿ ಇಷ್ಟೊಂದು ಸುದೀರ್ಘ ಯಾತ್ರೆ ನಿಜಕ್ಕೂ ಸಾಹಸದ ಕೆಲಸ. ಅದೂ ಮಹಿಳೆಯೊಬ್ಬರಿಗೆ ಇದು ತೀರಾ ಕಷ್ಟ. ಆದರೆ ಸಿಕ್ಕಿಹಾಕಿಕೊಂಡ ಮಗನನ್ನು ಕರೆ ತರಲೇಬೇಕು ಎಂಬ ಅದಮ್ಯ ಬಯಕೆ ಈ ಎಲ್ಲ ಭೀತಿಯನ್ನು ಹೋಗಲಾಡಿಸಿತು. ನಾನು ಜತೆಗೆ ರೊಟ್ಟಿ ಒಯ್ದಿದ್ದೆ. ಇದು ನನ್ನ ಪಯಣ ಮುಂದುವರಿಸಲು ಅನುವು ಮಾಡಿಕೊಟ್ಟಿತು. ಯಾವುದೇ ವಾಹನ ಸಂಚಾರ ಅಥವಾ ಜನಸಂಚಾರ ಇಲ್ಲದ ಕಾರಣ ರಾತ್ರಿ ವೇಳೆ ಭಯವಾಗುತ್ತಿತ್ತು ಎಂದು ಬೇಗಂ ವಿವರಿಸಿದ್ದಾರೆ.

ಹೈದರಾಬಾದ್‌ನಿಂದ ಸುಮಾರು 200 ಕಿಲೋಮೀಟರ್ ದೂರದ ನಿಝಾಮಾಬಾದ್ ಸರ್ಕಾರಿ ಶಾಲೆಯಲ್ಲಿ ಇವರು ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 15 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಬೇಗಂ, ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಹಿರಿಯ ಪುತ್ರ ಎಂಜಿನಿಯರಿಂಗ್ ಪದವೀಧರನಾಗಿದ್ದರೆ, ಕಿರಿಯ ಪುತ್ರ ನಿಝಾಮುದ್ದೀನ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ.

ಮಾರ್ಚ್ 12ರಂದು ಸ್ನೇಹಿತನನ್ನು ಬಿಡಲು ನೆಲ್ಲೂರಿನ ರಹ್ಮತಾಬಾದ್‌ಗೆ ತೆರಳಿದ್ದ ನಿಝಾಮುದ್ದೀನ್ ಅಲ್ಲೇ ಉಳಿದುಕೊಂಡಿದ್ದ. ಬಳಿಕ ಲಾಕ್‌ಡೌನ್ ಘೋಷಣೆಯಾದ್ದರಿಂದ ವಾಪಸ್ಸಾಗಲು ಸಾಧ್ಯವಾಗಿರಲಿಲ್ಲ. ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂಬ ಮಗನ ಅಸಹಾಯಕತೆಯನ್ನು ಕಂಡು ತಾವೇ ಈ ಸಾಹಸ ಕಾರ್ಯಾಚರಣೆಗೆ ಬೇಗಂ ಮುಂದಾದರು. ಹಿರಿಯ ಮಗನನ್ನು ಕಳುಹಿಸಿದರೆ, ಮೋಜಿಗಾಗಿ ಸವಾರಿ ಮಾಡುತ್ತಿದ್ದಾನೆ ಎಂದು ಪೊಲೀಸರು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸ್ವತಃ ತಾವೇ ದ್ವಿಚಕ್ರ ವಾಹನದಲ್ಲಿ ಮಗನನ್ನು ಕರೆತರುವ ಸಾಹಸ ಕಾರ್ಯಕ್ಕೆ ಕೈಹಾಕಿದರು.

ಎಪ್ರಿಲ್ 6ರಂದು ಮುಂಜಾನೆ ಹೊರಟ ಬೇಗಂ ಮರುದಿನ ಮಧ್ಯಾಹ್ನ ನೆಲ್ಲೂರು ತಲುಪಿದರು. ಅದೇ ದಿನ ಮಗನೊಂದಿಗೆ ಹೊರಟು, ಬುಧವಾರ ಸಂಜೆ ವಾಪಸ್ಸಾದರು. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಭರ್ತಿ ಮಾಡಿಕೊಳ್ಳಲು ಕೆಲವೆಡೆ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News