ಕೊರೋನ ಮತ್ತು ಮಾಧ್ಯಮಗಳು

Update: 2020-04-10 17:37 GMT

ಸಾಂಕ್ರಾಮಿಕವೊಂದರ ಹಿನ್ನೆಲೆಯಲ್ಲಿ ಸರಕಾರಕ್ಕೆ ಮಾಧ್ಯಮಗಳನ್ನೂ ಹತ್ತಿಕ್ಕುವ ಅಧಿಕಾರ ಇರಬೇಕೇ?. ಎಂಬುದು ಕೊರೋನ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಒಂದು ದೊಡ್ಡ ಪ್ರಶ್ನೆಯಾಗಿದೆ. ಅನುಕೂಲಕರವಲ್ಲದ ವಾಸ್ತವ ಸಂಗತಿಗಳನ್ನು ವರದಿ ಮಾಡದಂತೆ ಪತ್ರಕರ್ತರನ್ನು ತಡೆಯುವುದರಿಂದ ಸರಕಾರಕ್ಕೆ ಆರಾಮ ಅನ್ನಿಸಬಹುದು, ಆದರೆ ಇದರಿಂದ ಸಾರ್ವಜನಿಕರ ಸುರಕ್ಷತೆ ಕಡಿಮೆಯಾದಂತಾಗುತ್ತದೆ. ಅಮೆರಿಕದಂತಹ ಒಂದು ಸ್ಥಾಪಿತ ಪ್ರಜಾಪ್ರಭುತ್ವದಲ್ಲಿ ಇಂತಹ ಒಂದು ಪ್ರಶ್ನೆ ಕೇಳುವುದು ತೀರ ಬಾಲಿಶ ಅನ್ನಿಸಬಹದು. ಆದರೆ ಭಾರತವು ಸಂದಿಗ್ಧ ಸಮಯದಲ್ಲಿದೆ. ಎಪ್ರಿಲ್ ಮೊದಲ ವಾರದಲ್ಲಿ ಮೋದಿ ಸರಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿ ‘‘ಉದ್ದೇಶಿತವೋ ಅಥವಾ ಅನುದ್ದೇಶಿತವೋ ಆದ ಸುಳ್ಳು ಹಾಗೂ ಖಚಿತವಲ್ಲದ ಸುದ್ದಿಯನ್ನು ತಡೆಯುವ’’ ಒಂದು ಪ್ರಯತ್ನ ಮಾಡಿತು. ಇಂತಹ ಫೇಕ್‌ಸುದ್ದಿ ‘‘ಸಮಾಜದಲ್ಲಿ ಗಲಿಬಿಲಿ, ದಿಗಿಲು ಉಂಟು ಮಾಡಬಲ್ಲದು’’ ಎಂದು ಅದು ವಾದಿಸಿತು. ಇದಾದ ಬಳಿಕ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯ ನಗರಗಳಿಂದ ಕಾಲ್ನಡಿಗೆಯಲ್ಲೇ, ಹೊರಟು ತಮ್ಮ ತಮ್ಮ ಊರುಗಳಿಗೆ ಸಾಗುತ್ತಿರುವ ವರದಿಗಳು ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಪ್ರಕಟವಾದವು. ಸೋಂಕು ಹರಡುವುದನ್ನು ಕಡಿಮೆ ಮಾಡಲು ದೇಶದಲ್ಲಿ 21 ದಿನಗಳ ‘ಲಾಕ್‌ಡೌನ್’ ಘೋಷಿಸಲಾಯಿತು.

 ತೀವ್ರವಾದ ಜವಾಬ್ದಾರಿ ಪ್ರಜ್ಞೆಯಿಂದ ‘‘ಕೆಲಸ ಮಾಡಬೇಕೆಂದು ಮಾಧ್ಯಮಗಳನ್ನು ಒತ್ತಾಯಿಸಿದ ಸುಪ್ರೀಂ ಕೋರ್ಟ್ ಸಾಂಕ್ರಾಮಿಕ ಮುಕ್ತ ಚರ್ಚೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು, ಆ ಮೂಲಕ ತನ್ನ ವಿವೇಕವನ್ನು ವ್ಯಕ್ತಪಡಿಸಿತು. ಭಯ ಮತ್ತು ಭವಿಷ್ಯದ ಕುರಿತ ಆತಂಕದ ಒಂದು ವಾತಾವರಣದಲ್ಲಿ, ಪತ್ರಕರ್ತರನ್ನು ಹತ್ತಿಕ್ಕುವುದು, ಅವರನ್ನು ನಿಯಂತ್ರಿಸುವುದು ಅರ್ಥಪೂರ್ಣವಾದೀತೆ? ವಿವೇಕದ ಕೆಲಸವಾದಿತೆ? ಕೊರೋನ ವೈರಸ್ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧದ ಕೊರತೆಗಳನ್ನು ವಿಶ್ವಾದ್ಯಂತ ನ್ಯೂಸ್ ಚಾನೆಲ್‌ಗಳು ಬಿತ್ತರಿಸುತ್ತಿವೆ. ನೀವು ಗುಹೆವೊಂದರಲ್ಲಿ ಅಡಗಿ ಕುಳಿತಿಲ್ಲವಾದಲ್ಲಿ ನಿಮಗೆ ಪ್ರಾಯಶಃ ತಿಳಿದಿದೆ: ಅಮೆರಿಕದಲ್ಲಿ ವೈದ್ಯರಿಗೆ ಹಾಗೂ ದಾದಿಯರಿಗೆ ಅಗತ್ಯವಾಗಿರುವ ಎನ್-95 ಮಾಸ್ಕ್‌ಗಳು ಹಾಗೂ ರಕ್ಷಣಾ ಕವಚಗಳ, ಸಲಕರಣೆಗಳ ಕೊರತೆ ಇದೆ. ವೈರಸ್ ಪತ್ತೆಗೆ ಅಮೆರಿಕ ಮಾಡುತ್ತಿರುವ ಪ್ರಯತ್ನ ನಿಜವಾಗಿಯೂ ಸಾಕಷ್ಟು ಗಂಭೀರವಾಗಿದೆಯೇ? ಎಂದು ತಜ್ಞರು ಚರ್ಚಿಸುತ್ತಿದ್ದಾರೆ. ವರದಿಗಾರರು ಅಮೆರಿಕದ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಡ್ರಾಮಾ ಮತ್ತು ಹತಾಶೆಯ ಕುರಿತ ಭಯಾನಕ ವಿವರಗಳನ್ನು ಬಯಲು ಮಾಡುತ್ತಿದ್ದಾರೆ. ಪ್ರತಿದಿನ ಸಾವಿನ ಸಂಖ್ಯೆ ಏರುತ್ತಲೇ ಇದೆ: ಎಪ್ರಿಲ್ 2 ಗುರುವಾರ ಒಂದೇ ದಿನ 1,000ರಕ್ಕೂ ಹೆಚ್ಚು ಮಂದಿ ಮೃತಪಟ್ಟರು.
 
ಸರ್ವಾಧಿಕಾರಿ ಮನೋಭಾವದ ಜನರಿಗೆ, ಅಮೆರಿಕ ಗೊಂದಲಮಯವಾಗಿ ಹಾಗೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳದ ಒಂದು ದೇಶವಾಗಿ ಕಾಣುತ್ತದೆ. ಇದನ್ನು ಚೀನಾದೊಂದಿಗೆ ಹೋಲಿಸಿ ನೋಡಿ: ಕಟ್ಟುನಿಟ್ಟಾದ ಸರಕಾರಿ ಕ್ರಮಗಳು ಹಾಗೂ ಸಮರ್ಥ ತಂತ್ರಜ್ಞಾನದ ಮೂಲಕ ತಾನು ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಿದ್ದೇನೆ ಎಂದು ಚೀನಾ ಹೇಳಿಕೊಳ್ಳುತ್ತಿದೆ. ಹೌದು, ವಿಶ್ವಾದ್ಯಂತ ಹರಡಿರುವ ಕಾಡ್ಗಿಚ್ಚನ್ನು ಹಚ್ಚಿದ ಬಳಿಕ ಈಗ ವಿದೇಶಗಳಿಗೆ ವೈದ್ಯರನ್ನು ಹಾಗೂ ವೈದ್ಯಕೀಯ ಉಪಕರಣಗಳನ್ನು ಕಳುಹಿಸುವ ಮೂಲಕ ಚೀನಾ ಜಾಗತಿಕ ಅಗ್ನಿ ಶಮನ ಕಾರ್ಯಕರ್ತನ ಪಾತ್ರವಹಿಸುವುದರಲ್ಲಿ ಬಿಜಿಯಾಗಿದೆ. ತಮ್ಮ ಹೆಗ್ಗಳಿಕೆಯ ಬಲೂನಿಗೆ ಚುಚ್ಚುವ ವರದಿಗಾರರ ಬಗ್ಗೆ ತಲೆಕೆಡಿಸಿಕೊಳ್ಳದೆ ಚೀನಾದ ನಾಯಕರು ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳ ಸ್ವಾತಂತ್ರದ ವಿಷಯದಲ್ಲಿ ಭಾರತವು ಅಮೆರಿಕ ಮತ್ತು ಚೀನಾದ ಮಧ್ಯಬಿಂದುವಿನಲ್ಲಿದೆ. ಹಲವು ದೇಶಗಳ ಹಾಗೆ ಭಾರತ ಇಂತಹ ಸ್ಥಿತಿಯಲ್ಲಿದೆ. ಭಾರತ ಒಂದು ಸರ್ವಾಧಿಕಾರಿ ದೇಶವಲ್ಲ. ಆದರೆ ಅದು ಅರೆ ಸರ್ವಾಧಿಕಾರಿ ಲಕ್ಷಣಗಳನ್ನು ದಿನ ಕಳೆದಂತೆ ಹೆಚ್ಚು ಹೆಚ್ಚಾಗಿ ಹೊಂದುತ್ತಿರುವ ಒಂದು ಪ್ರಜಾಪ್ರಭುತ್ವವಾಗಿದೆ. ದೇಶದ ಪ್ರಧಾನಿ ಅವರು ಮೇಲಿನಿಂದ, ಅತ್ಯುನ್ನತ ನೆಲೆಯಿಂದ ಸೂಚನೆಗಳನ್ನು ನೀಡುತ್ತಾರೆ, ಘೋಷಣೆಗಳನ್ನು ಹೊರಡಿಸುತ್ತಾರೆ. ಬಹುತೇಕ ಪ್ರತಿದಿನ ಅಮೆರಿಕದ ವರದಿಗಾರರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶ್ನಿಸುವ ಹಾಗೆ ಭಾರತದಲ್ಲಿ ಪ್ರಧಾನಿ ಅವರನ್ನು ಯಾವ ವರದಿಗಾರನೂ ಪ್ರಶ್ನಿಸುವ ಧೈರ್ಯ ತೋರಲಾರ. ನೀವೇನಾದರೂ ಒಂದು ವೇಳೆ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ, ಯುದ್ಧದಲ್ಲಿ ದೋಷಗಳೆಡೆಗೆ ಬೆಟ್ಟು ಮಾಡಿದರೆ ಉದಾಹರಣೆಗೆ ಸಾಕಷ್ಟು ವ್ಯಾಪಕವಲ್ಲದ ಪರೀಕ್ಷೆ/ಪತ್ತೆಯ ಬಗ್ಗೆ ಆಗ ತಕ್ಷಣ ಸಾಮಾಜಿಕ ಮಾಧ್ಯಮಗಳ ಥಳಿತದ ಗುಂಪು (ಲಿಂಚ್ ಮಾಬ್) ನಿಮ್ಮ ಮೇಲೆ ಎರಗುತ್ತದೆ.

ಸದ್ಯದ ಪರಿಸ್ಥಿತಿಗೆ ಇತರ ಕ್ರಮಗಳಿಂದ ಹೆಚ್ಚಾಗಿ ಪೊಲೀಸರ ಕಾರ್ಯಾಚರಣೆ, ಕೈ ಚಳಕವೇ ಹೆಚ್ಚು ಸೂಕ್ತ, ಹೆಚ್ಚು ಅಗತ್ಯ ಎಂದು ನಂಬುವವರಿಗೆ ವರದಿಗಾರರ ಲೇಖನ ಒಂದು ಸಮಸ್ಯೆಯಾಗಿ ಕಾಣುತ್ತದೆ. ಇಂಥವರು ಪತ್ರಕರ್ತರು ಸರಕಾರದ ಕ್ರಮಗಳನ್ನು ಹಾಡಿ ಹೊಗಳುವ ‘ಚಿಯರ್ ಲೀಡರ್ಸ್‌ಗಳಂತೆ ಕಾರ್ಯವೇಸಗಬೇಕೆಂದು ನಿರೀಕ್ಷಿಸುತ್ತಾರೆ. ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನ ಯಶಸ್ಸು, ಸಾಧನೆ ಎಂದು ತನ್ನ ಹೆಗ್ಗಳಿಕೆಯನ್ನು ಸರಕಾರ ಹೇಳಿಕೊಂಡಾಗ ಅದನ್ನು ಹಾಗೆಯೇ ಒಪ್ಪಿ, ಮುಜುಗರ ಉಂಟು ಮಾಡುವ ಯಾವುದೇ ಪ್ರಶ್ನೆಗಳನ್ನು ಕೇಳಬಾರದೆಂದು ನಿರೀಕ್ಷಿಸಲಾಗುತ್ತದೆ. ನಿರಾಶದಾಯಕವಾದ ಮಾಹಿತಿಯನ್ನು, ಸುದ್ದಿಗಳನ್ನು ಸಣ್ಣದು ಮಾಡಿ ಸಾರ್ವಜನಿಕರ ಸ್ಥೈರ್ಯವನ್ನು ಉಳಿಸುವಂತೆ ವರದಿ ಮಾಡಬೇಕೆಂದು ಹಲವರು ಬಯಸುತ್ತಾರೆ. ಇಂತಹ ದೃಷ್ಟಿಕೋನದ ಪ್ರಕಾರ, ಸರಕಾರವನ್ನು ಮಾಧ್ಯಮಗಳು ಪ್ರಶ್ನಿಸಬಾರದು. ಬದಲಾಗಿ ಬಿಕ್ಕಟ್ಟಿನ ಒಂದು ಸಮಯದಲ್ಲಿ ಸರಕಾರದ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುವುದು ಮಾಧ್ಯಮಗಳು ವಹಿಸಬೇಕಾದ ಪಾತ್ರ...
(ಮುಂದುವರಿಯುವುದು)

ಕೃಪೆ: the times of india

Writer - ಸದಾನಂದ್ ಧುಮೆ

contributor

Editor - ಸದಾನಂದ್ ಧುಮೆ

contributor

Similar News