×
Ad

ಸಿಎಂ ಪರಿಹಾರ ನಿಧಿಗೆ ನೀಡುವ ದೇಣಿಗೆಯನ್ನು ಸಾಮಾಜಿಕ ಹೊಣೆಗಾರಿಕೆ ನಿಧಿ ಎಂದು ಪರಿಗಣಿಸುವುದಿಲ್ಲ

Update: 2020-04-12 15:21 IST

ಹೊಸದಿಲ್ಲಿ, ಎ.12: ಕಂಪೆನಿಗಳು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ‘ ಅಥವಾ ‘ಕೋವಿಡ್-19'ಗಾಗಿ ರಾಜ್ಯ ಪರಿಹಾರ ನಿಧಿ’ಗೆ ಆರ್ಥಿಕ ದೇಣಿಗೆಗಳನ್ನು ಸಲ್ಲಿಸಿದರೆ ಅವುಗಳನ್ನು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಎಂದುಪರಿಗಣಿಸಲು ಹಾಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸ್ಪಷ್ಟಪಡಿಸಿದೆ.

ಕಾನೂನಿನಂತೆ ಕಂಪನಿಗಳು ತಮ್ಮ ಲಾಭದ ಶೇ.2ರಷ್ಟು ಮೊತ್ತವನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಗಾಗಿ ಬಳಸುವುದು ಕಡ್ಡಾಯವಾಗಿದೆ. ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಸ್ಥಾಪಿಸಲಾಗಿರುವ ಮೋದಿಯವರ ‘ಪಿಎಂ ಕೇರ್ಸ್ ಫಂಡ್’ಗೆ ಸಲ್ಲಿಕೆಯಾಗುವ ಎಲ್ಲ ಕಾರ್ಪೊರೇಟ್ ದೇಣಿಗೆಗಳನ್ನು ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯವು ಎರಡು ವಾರಗಳ ಹಿಂದೆ ಹೇಳಿತ್ತು. ಹೀಗಾಗಿ ಕಂಪನಿಗಳು ರಾಜ್ಯಕ್ಕೆ ಸಿಎಸ್‌ಆರ್ ನಿಧಿಯನ್ನು ನೀಡಲು ಮುಂದಾಗುತ್ತಿಲ್ಲ.

ಕಂಪನಿಗಳು ತಮ್ಮ ದೇಣಿಗೆಗಳು ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲ್ಪಡಬೇಕಾದರೆ ಅವುಗಳನ್ನು ರಾಜ್ಯ ಸರಕಾರದ ‘ವಿಪತ್ತು ನಿರ್ವಹಣೆ ಪ್ರಾಧಿಕಾರ’ಕ್ಕೆ ಸಲ್ಲಿಸಬೇಕಾಗುತ್ತದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಕೆಯಾಗುವ ದೇಣಿಗೆಗಳು ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲ್ಪಡುತ್ತವೆಯೇ ಎಂಬ ಬಗ್ಗೆ ಹಲವಾರು ಕೋರಿಕೆಗಳನ್ನು ಕಳೆದ ಕೆಲವು ವಾರಗಳಲ್ಲಿ ಕಂಪನಿ ವ್ಯವಹಾರಗಳ ಸಚಿವಾಲಯ ಮತ್ತು ವಿತ್ತ ಸಚಿವಾಲಯಗಳು ಸ್ವೀಕರಿಸಿರುವಂತಿದೆ. ಆದರೆ ಹಾಲಿ ಕಾನೂನಿನಡಿ ಇದಕ್ಕೆ ಅವಕಾಶವಿಲ್ಲ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಕೋವಿಡ್-19ಗಾಗಿ ರಾಜ್ಯ ಪರಿಹಾರ ನಿಧಿ ಕಂಪನಿಗಳ ಕಾಯ್ದೆ,2013ರ ಏಳನೇ ಅನುಸೂಚಿಯಲ್ಲಿ ಸೇರ್ಪಡೆಗೊಂಡಿಲ್ಲ. ಆದ್ದರಿಂದ ಇವುಗಳಿಗೆ ನೀಡುವ ದೇಣಿಗೆಗಳು ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲು ಅರ್ಹವಾಗುವುದಿಲ್ಲ ಎಂದು ಕಂಪನಿ ವ್ಯವಹಾರಗಳ ಸಚಿವಾಲಯವು ಸುತ್ತೋಲೆಯಲ್ಲಿ ಹೇಳಿದೆ.

ಆದರೆ ಕೋವಿಡ್-19ರ ವಿರುದ್ಧ ಹೋರಾಡಲು ಆಯಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವ ಕಾರ್ಪೊರೇಟ್ ದೇಣಿಗೆಗಳು ಕಂಪನಿಗಳ ಕಾಯ್ದೆಯ ಏಳನೇ ಅನುಸೂಚಿಯಡಿ ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲು ಅರ್ಹವಾಗಿವೆ ಎಂದೂ ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.

ಈ ನಿರ್ಬಂಧಗಳನ್ನು ಟೀಕಿಸಿರುವ ಪ್ರತಿಪಕ್ಷ ನಾಯಕರು ನರೇಂದ್ರ ಮೋದಿ ಸರಕಾರವೇಕೆ ಈ ನಿಯಮಗಳನ್ನು ತಿದ್ದುಪಡಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ತಮಿಳುನಾಡು ಸರಕಾರವು ಕೋವಿಡ್-19ರ ವಿರುದ್ಧ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾಗುವ ಎಲ್ಲ ದೇಣಿಗೆಗಳನ್ನು ಸಿಎಸ್‌ಆರ್ ವೆಚ್ಚವೆಂದು ಅರ್ಹವಾಗಿಸಲು ಅವುಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವರ್ಗಾಯಿಸುವಂತೆ ಶನಿವಾರ ತಡರಾತ್ರಿ ಆದೇಶಿಸಿದೆ.

ಕಂಪನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ದೇಣಿಗೆಗಳನ್ನು ಸಿಎಸ್‌ಆರ್ ವೆಚ್ಚವೆಂದು ಪರಿಗಣಿಸಲು ಸಾಧ್ಯವಾಗುವಂತೆ ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News