ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಕೊರೋನ ವೈರಸ್ ಸೋಂಕು ದೃಢ
ಲಕ್ನೊ, ಎ.13: ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ನೋಯ್ಡಾದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಇಬ್ಬರು ವ್ಯಕ್ತಿಗಳು ಮೂರನೇ ಸುತ್ತಿನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದು ಮತ್ತೆ ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಘಟನೆ ವರದಿಯಾಗಿದೆ.
ನೋಯ್ಡಾದ ಗವರ್ನ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್(ಜಿಐಎಂಎಸ್)ಗೆ ದಾಖಲಾಗಿದ್ದ ಇಬ್ಬರು ವ್ಯಕ್ತಿಗಳು 24 ಗಂಟೆಯ ಅವಧಿಯಲ್ಲಿ ನಡೆಸಲಾದ ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆ ಮಾಡುವಾಗ ನಡೆಸಿದ್ದ ಮೂರನೇ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು ಅದರಲ್ಲಿ ಪಾಸಿಟಿವ್ ಎಂದು ಕಂಡುಬಂದಿದೆ. ಈಗ ವೈದ್ಯರ ಪರಿಶೀಲನೆಯ ಬಳಿಕ ಕೇಂದ್ರ ಸರಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಉತ್ತರಪ್ರದೇಶದಲ್ಲಿ ಸೋಮವಾರದವರೆಗೆ 483 ಕೊರೋನ ಸೋಂಕು ದೃಢಪಟ್ಟಿದ್ದು ಮೂವರು ಮೃತಪಟ್ಟಿದ್ದಾರೆ.