×
Ad

ಕೊರೋನವನ್ನು ತಬ್ಲೀಗಿಗಳ ತಲೆಗೆ ಕಟ್ಟಲು 'ಆರೋಗ್ಯ ಕಾರ್ಯದರ್ಶಿಯ' ಹೇಳಿಕೆಯನ್ನೇ ತಿರುಚಿದ ಎ ಎನ್ ಐ ಸುದ್ದಿಸಂಸ್ಥೆ

Update: 2020-04-13 14:05 IST

ಹೊಸದಿಲ್ಲಿ: ಕೊರೋನ ಸೋಂಕು ಹರಡುವ ಕುರಿತು ದೇಶದ ಪ್ರಮುಖ ಸುದ್ದಿ ಸಂಸ್ಥೆ ಎ ಎನ್ ಐ ಇನ್ನೊಮ್ಮೆ ಸುಳ್ಳು ಸುದ್ದಿ ಬಿತ್ತರಿಸಿ ಮುಜುಗರ ಎದುರಿಸಿದೆ. ತಮಿಳುನಾಡಿನ ಅರೋಗ್ಯ ಕಾರ್ಯದರ್ಶಿಯ ಪತ್ರಿಕಾ ಹೇಳಿಕೆ ಕುರಿತ ಸುದ್ದಿಯನ್ನು ತನಗೆ ಬೇಕಾದಂತೆ ತಿರುಚಿ ಪ್ರಕಟಿಸಿರುವ ಎ ಎನ್ ಐ ತಾನು ಮಾಡಿರುವ ತಪ್ಪು ಬೆಳಕಿಗೆ ಬರುತ್ತಿದ್ದಂತೆ ಸುದ್ದಿಯನ್ನು ತಿದ್ದಿ ಮರು ಪ್ರಕಟಿಸಿದೆ. 

ಏಪ್ರಿಲ್ 12 ರಂದು ಟ್ವೀಟ್ ಮಾಡಿದ್ದ ಎ ಎನ್ ಐ "ಇಂದು ಒಟ್ಟು 106 ಹೊಸ ಕೊರೊನ ಪ್ರಕರಣಗಳು ಬೆಳಕಿಗೆ ಬಂದಿದ್ದು ಅದರಲ್ಲಿ 90 ಪ್ರಕರಣಗಳು 'ಒಂದೇ ಸಂಪರ್ಕದಿಂದ' ಬಂದಿವೆ. ಒಟ್ಟು ರಾಜ್ಯದಲ್ಲಿ 1075 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಪೈಕಿ 917 ಪ್ರಕರಣಗಳು 'ಒಂದೇ ಸಂಪರ್ಕದಿಂದ' ಬಂದಿವೆ. ಒಟ್ಟು 11 ಮಂದಿ ಮೃತಪಟ್ಟಿದ್ದಾರೆ" ಎಂದು ರಾಜ್ಯದ ಅರೋಗ್ಯ ಕಾರ್ಯದರ್ಶಿ ಬೀಲ ರಾಜೇಶ್ ತಿಳಿಸಿದ್ದಾರೆ ಎಂದು ಟ್ವೀಟ್ ಮಾಡಿತ್ತು. 

ದೇಶದಲ್ಲಿ ಕೊರೊನ ಸೋಂಕು ಹರಡಲು ದಿಲ್ಲಿಯ ತಬ್ಲೀಗಿ ಜಮಾಅತ್ ನ ಕಾರ್ಯಕ್ರಮವೇ ಮುಖ್ಯ ಕಾರಣ ಎಂಬರ್ಥದ ಸುದ್ದಿಗಳೇ ಹೆಚ್ಚು ಪ್ರಸಾರವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಎ ಎನ್ ಐ ಪ್ರಕಟಿಸಿದ ಈ ಸುದ್ದಿ ಮಹತ್ವ ಪಡೆದಿತ್ತು. ತಮಿಳುನಾಡಿನ ಒಟ್ಟು ಪ್ರಕರಣಗಳ ಪೈಕಿ ಸುಮಾರು 90% ಪ್ರಕರಣಗಳು ಕೇವಲ ತಬ್ಲೀಗಿ ಸಂಪರ್ಕದಿಂದಲೇ ಬಂದಿವೆ ಎಂದು ಸೂಚಿಸುವಂತೆ ಈ ಸುದ್ದಿ ಇತ್ತು. ನಿರೀಕ್ಷೆಯಂತೆ ಎ ಎನ್ ಐ ನ ಈ ಸುದ್ದಿಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು ಬಲಪಂಥೀಯರು ಈ ಪ್ರಕರಣಗಳಿಗೆ ತಬ್ಲೀಗಿ, ಇಸ್ಲಾಂ ಕಾರಣ ಎಂದು ಜರೆದಿದ್ದರು.

ಆದರೆ ವಾಸ್ತವ ಬೇರೆಯೇ ಇತ್ತು. ನಿಜವಾಗಿ ತಮಿಳು ನಾಡು ಅರೋಗ್ಯ ಕಾರ್ಯದರ್ಶಿ 'ಏಕೈಕ ಸಂಪರ್ಕದ' ಉಲ್ಲೇಖವನ್ನೇ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾಡಿರಲಿಲ್ಲ. "ಇಂದು ( ಎಪ್ರಿಲ್ 12) ಒಟ್ಟು 106 ಪ್ರಕರಣಗಳು ಪತ್ತೆಯಾಗಿದ್ದು ಆ ಪೈಕಿ 16 ಪ್ರಯಾಣ ಮಾಡಿದ ವ್ಯಕ್ತಿಗಳು ಉಳಿದ 90 ಆ ಪ್ರಯಾಣ ಮಾಡಿದ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರು" ಎಂದು ಹೇಳಿದ್ದರು. ಇದನ್ನು altnews ನ ಸಹಸ್ಥಾಪಕ ಮೊಹಮ್ಮದ್ ಝುಬೇರ್ ಅವರು ಟ್ವೀಟ್ ಮಾಡಿದ್ದರು. 

ತಾನು ಮಾಡಿದ ತಪ್ಪು ಸುದ್ದಿಯ ಬಗ್ಗೆ altnews ಜನರ ಗಮನ ಸೆಳೆಯುತ್ತಲೇ ಎಚ್ಚೆತ್ತುಕೊಂಡ ಎ ಎನ್ ಐ ಇನ್ನೊಂದು ಟ್ವೀಟ್ ಮಾಡಿ ಸರಿ ಸುದ್ದಿಯನ್ನು ಪ್ರಕಟಿಸಿ ಅದರ ಜೊತೆ "ನಮ್ಮ ವರದಿಗಾರರಿಂದ ತಪ್ಪಾಗಿದೆ. ತಮಿಳು ನಾಡು ಅರೋಗ್ಯ ಕಾರ್ಯದರ್ಶಿ 'ಏಕೈಕ ಸಂಪರ್ಕದ' ಕುರಿತು ಹೇಳಲೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿತು.  

ಈ ಹಿಂದೆಯೂ ಕೊರೋನ ಕುರಿತು ಸುಳ್ಳು ಸುದ್ದಿ ಹರಡಿ ಎ ಎನ್ ಐ ಸಿಕ್ಕಿ ಬಿದ್ದಿತ್ತು. ನೋಯ್ಡಾದಲ್ಲಿ ತಬ್ಲೀಗಿಗಳ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಲ್ಲಿನ ಡಿಸಿಪಿಯ ಪ್ರಕಟಣೆಯ ಹೆಸರಲ್ಲಿ ವರದಿ ಮಾಡಿತ್ತು. "ಇದು ಸುಳ್ಳು. ತಬ್ಲೀಗಿ ಜಮಾಅತ್ ಕುರಿತು ನಾವು ಉಲ್ಲೇಖವೇ ಮಾಡಿಲ್ಲ, ನೀವು ಸುಳ್ಳು ಸುದ್ದಿ ಹರಡುತ್ತಿದ್ದೀರಿ" ಎಂದು ಎಂದು ಡಿಸಿಪಿ  ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News