"ಆರೆಸ್ಸೆಸ್ ಕಾರ್ಯಕರ್ತರಿಗೆ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಯಿರಲಿಲ್ಲ"

Update: 2020-04-13 10:16 GMT
Photo: Twitter(@friendsofrss)

ಹೈದರಾಬಾದ್: ಲಾಕ್‍ಡೌನ್ ವೇಳೆ ಈ ವಾರ ಚೆಕ್ ಪೋಸ್ಟ್ ಗಳಲ್ಲಿ ಗಸ್ತು ನಡೆಸಲು ಆರೆಸ್ಸೆಸ್ ಕಾರ್ಯಕರ್ತರಿಗೆ ಅನುಮತಿಯಿರಲಿಲ್ಲ ಎಂದು ತೆಲಂಗಾಣ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.  ಆರೆಸ್ಸೆಸ್ ಸಮವಸ್ತ್ರದಲ್ಲಿದ್ದ ಹಾಗೂ ಕೈಗಳಲ್ಲಿ ಲಾಠಿ ಹಿಡಿದುಕೊಂಡಿದ್ದ ಕೆಲ ವ್ಯಕ್ತಿಗಳು ಹೈದರಾಬಾದ್‍ನ ಹೊರವಲಯದ ಹೆದ್ದಾರಿಯಲ್ಲಿ ತಿರುಗಾಡುತ್ತಿರುವ ಕೆಲ ಛಾಯಾಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. 'ಫ್ರೆಂಡ್ಸ್ ಆಫ್‍ ಆರೆಸ್ಸೆಸ್' ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಲಾದ ಈ ಫೋಟೋಗಳ ಜತೆಗೆ "ಆರೆಸ್ಸೆಸ್ ಕಾರ್ಯಕರ್ತರು ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಚೆಕ್ ಪಾಯಿಂಟ್‍ನಲ್ಲಿ ಪ್ರತಿ ದಿನ ಪೊಲೀಸ್ ಇಲಾಖೆಗೆ ನೆರವಾಗುತ್ತಿದ್ದಾರೆ.'' ಎಂದು ಬರೆಯಲಾಗಿತ್ತು. ಈ ಟ್ವೀಟ್ ಅನ್ನು ಎಪ್ರಿಲ್ 9ರಂದು ಮಾಡಲಾಗಿತ್ತು ಹಾಗೂ ಪೊಲೀಸರು ಆರೆಸ್ಸೆಸ್ ಸಹಾಯ ಕೋರಿದ್ದರೇ ಅಥವಾ ಇಂತಹ ಕೆಲಸ ಮಾಡಲು ಆರೆಸ್ಸೆಸ್ಸಿಗೆ ಯಾರು ಅನುಮತಿಸಿದ್ದರು ಎಂದು ಹಲವರು ಪ್ರಶ್ನಿಸಲಾರಂಭಿಸಿದ್ದರು.

ಈ ನಿರ್ದಿಷ್ಟ ಚೆಕ್ ಪಾಯಿಂಟ್ ಇರುವ ಪೊಲೀಸ್ ಠಾಣಾ ವ್ಯಾಪ್ತಿಯ ರಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗ್ವತ್ ಇಂತಹ ಒಂದು ಬೆಳವಣಿಗೆಯನ್ನು ದೃಢೀಕರಿಸಿದ್ದು "ಆರೆಸ್ಸೆಸ್ ಕಾರ್ಯಕರ್ತರು ಸಹಾಯ ಮಾಡಲು ಮುಂದೆ ಬಂದಿದ್ದರು ಹಾಗೂ ಪೊಲೀಸರು 'ನಾವು ನಮ್ಮ ಕರ್ತವ್ಯ ನಿಭಾಯಿಸಬಲ್ಲೆವು,' ಎಂದು ಹೇಳಿದರು ಮತ್ತೆ ಅವರು ಬಂದಿಲ್ಲ,'' ಎಂದರು.

ಸ್ಥಳೀಯ ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರ ಸಹಾಯ ಕೋರಿದ್ದು ಕೆಲ ಜನರು ಇದಕ್ಕೆ ವಿರೋಧಿಸಿದ್ದರಿಂದ ಪೊಲೀಸರು ಒತ್ತಡದಲ್ಲಿದ್ದಾರೆ ಎಂದು ಆರೆಸ್ಸೆಸ್ ತೆಲಂಗಾಣ ಪ್ರಾಂತ್ ಪ್ರಚಾರ್ ಪ್ರಮುಖ್ ಆಯುಷ್ ನದೀಂಪಳ್ಳಿ  ಹೇಳಿದ್ದಾರೆ. ದೇಶಾದ್ಯಂತ ಲಾಕ್‍ಡೌನ್‍ನಿಂದ ಸಮಸ್ಯೆಗೊಳಗಾಗಿರುವ ಹಲವು ಜನರಿಗೆ ಆರೆಸ್ಸೆಸ್ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ ಎಂದು ನದೀಂಪಳ್ಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News