ಮಾಜಿ ಅಟಾರ್ನಿ ಜನರಲ್ ಅಶೋಕ್ ದೇಸಾಯಿ ನಿಧನ
ಹೊಸದಿಲ್ಲಿ, ಎ.13: ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ,ಭಾರತದ ಮಾಜಿ ಅಟಾರ್ನಿ ಜನರಲ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಅಶೋಕ ದೇಸಾಯಿ (77) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.
1956ರಲ್ಲಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದ ದೇಸಾಯಿ 1996,ಜು.9ರಿಂದ 1998,ಮೇ 6ರವರೆಗೆ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 1989-90ರ ಅವಧಿಯಲ್ಲಿ ಸಾಲಿಸಿಟರ್ ಜನರಲ್ ಕೂಡ ಆಗಿದ್ದರು. 2001ರಲ್ಲಿ ಪದ್ಮಭೂಷಣ ಮತ್ತು ಲಾ ಲ್ಯುಮಿನರಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಸಲಿಂಗರತಿಯು ಅಪರಾಧವಲ್ಲ ಎಂಬ ಐತಿಹಾಸಿಕ ತೀರ್ಪು ಹೊರಬಿದ್ದಿದ್ದ ಪ್ರಕರಣದಲ್ಲಿ ಅರ್ಜಿದಾರರೋರ್ವರ ಪರವಾಗಿ ವಾದಿಸಿದ್ದ ದೇಸಾಯಿ,ವಿನೀತ ನಾರಾಯಣ ಪ್ರಕರಣ ಮತ್ತು ನರ್ಮದಾ ಜಲಾಶಯ ಪ್ರಕರಣಗಳಲ್ಲಿಯೂ ವಾದಿಸಿದ್ದರು.
ಹಲವಾರು ರಾಜಕಾರಣಿಗಳು ಮತ್ತು ವಕೀಲರು ಟ್ವಿಟರ್‌ನಲ್ಲಿ ದೇಸಾಯಿ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ‘ದೇಸಾಯಿಯವರ ನಿಧನ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ’ಎಂದು ಎನ್‌ಸಿಪಿ ವರಿಷ್ಠ ಶರದ ಪವಾರ್ ಟ್ವೀಟಿಸಿದ್ದಾರೆ.