ಅಗತ್ಯ ವಸ್ತುಗಳ ಸಾಗಾಟದ ವಾಹನಗಳನ್ನು ತಡೆಯಲಾಗುತ್ತಿದೆ, ಇದು ಕೊರತೆಗೆ ಕಾರಣವಾಗಬಹುದು: ಕೇಂದ್ರದ ಎಚ್ಚರಿಕೆ
ಹೊಸದಿಲ್ಲಿ, ಎ.13: ದೇಶವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲಿ ನೀಡಲಾಗಿರುವ ಕೆಲವು ವಿನಾಯಿತಿಗಳನ್ನು ದೇಶದ ಕೆಲವು ಭಾಗಗಳಲ್ಲಿ ಸೂಕ್ತವಾಗಿ ಪಾಲಿಸಲಾಗುತ್ತಿಲ್ಲ ಎಂದು ಹೇಳಿರುವ ಕೇಂದ್ರವು,ಅಗತ್ಯ ಸಾಮಗ್ರಿಗಳನ್ನು ಹೊತ್ತಿರುವ ವಾಹನಗಳನ್ನು ತಡೆಯಲಾಗುತ್ತಿದ್ದು,ಇದು ವಸ್ತುಗಳ ಕೊರತೆಗೆ ಕಾರಣವಾಗಬ ಹುದು ಎಂದು ತಿಳಿಸಿದೆ.
ಅಗತ್ಯ ಮತ್ತು ಅಗತ್ಯವಲ್ಲದ ಸರಕುಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆಯಲಾಗುತ್ತಿದೆ ಮತ್ತು ಖಾದ್ಯತೈಲ, ಬೇಳೆಗಳು, ಗೋದಿಹಿಟ್ಟು ಇತ್ಯಾದಿ ಅಗತ್ಯ ವಸ್ತುಗಳ ತಯಾರಿಕೆ ಘಟಕಗಳ ಕಾರ್ಯಾಚರಣೆಗೆ ಅಗತ್ಯವಾಗಿರುವ ಕಾರ್ಮಿಕರಿಗೆ ಮತ್ತು ಇತರ ವಿನಾಯಿತಿ ವರ್ಗಗಳಿಗೆ ಚಲನವಲನಗಳಿಗೆ ಅಗತ್ಯ ಪಾಸ್ ದೊರೆಯುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ವಿನಾಯಿತಿ ನೀಡಲಾಗಿರುವ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಬಹುದು ಎಂದು ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಅಂತರ ನಿಯಮಗಳು ಮತ್ತು ಸ್ವಚ್ಛತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅವರು ಸೂಚಿಸಿದ್ದಾರೆ. ಸರಕಾರವು ಕೊರೋನ ವೈರಸ್ ಹಾಟಸ್ಪಾಟ್ ಎಂದು ಗುರುತಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ಕಡೆಗಳಲ್ಲಿಯೂ ಈ ನಿರ್ದೇಶಗಳು ಅನ್ವಯವಾಗುತ್ತವೆ ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.