ಮಧ್ಯಪ್ರದೇಶ: ಕಮಲನಾಥ್‌ಗೆ ಹಿನ್ನಡೆ; ರಾಜ್ಯಪಾಲರ ಆದೇಶ ಎತ್ತಿಹಿಡಿದ ಸುಪ್ರೀಂ

Update: 2020-04-13 16:38 GMT

ಭೋಪಾಲ, ಎ.13: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ 22 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ವಿಶ್ವಾಸಮತ ಕೋರಬೇಕೆಂದು ಸರಕಾರಕ್ಕೆ ಸೂಚಿಸಿದ್ದ ರಾಜ್ಯಪಾಲರ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡಿದ್ದರಿಂದ ಪರಿಸ್ಥಿತಿಯನ್ನು ಗಮನಿಸಿ ರಾಜ್ಯಪಾಲರು ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿರುವುದು ನಿಯಮ ಪ್ರಕಾರ ಸರಿಯಾಗಿದೆ ಮತ್ತು ಇದು ಅಗತ್ಯವಾಗಿತ್ತು ಎಂದು ನ್ಯಾ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುವ ಮೂಲಕ ಬಿಜೆಪಿಯು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರದ ಪತನಕ್ಕೆ ಷಡ್ಯಂತ್ರ ಮಾಡಿತ್ತು ಎಂಬ ಕಾಂಗ್ರೆಸ್‌ನ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ ಚಂದ್ರಚೂಡ್, ಕುದುರೆ ವ್ಯಾಪಾರ, ಆಮಿಷ ಇತ್ಯಾದಿ ಪದಗಳು ಈಗ ರಾಜಕೀಯ ಕ್ಷೇತ್ರದಲ್ಲಿ ಪದೇ ಪದೇ ಬಳಕೆಯಾಗುತ್ತಿದೆ. ರಾಜಕೀಯ ಕ್ಷೇತ್ರದ ಹೊಲಸು ವಿಷಯಗಳಿಂದ ನ್ಯಾಯಾಲಯ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದರು.

ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ಗೆ ಹಿನ್ನಡೆಯಾಗಿದ್ದರೆ, ಕಾಂಗ್ರೆಸ್‌ನ ಶಾಸಕರ ರಾಜೀನಾಮೆಯ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ್ದ ಬಿಜೆಪಿ ಮುಖಂಡ ಶಿವರಾಜ್ ಚೌಹಾಣ್ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯಪಾಲರು ಸದನ ಸಮಾವೇಶಕ್ಕೆ ಸರಕಾರಕ್ಕೆ ಸೂಚನೆ ನೀಡಬಹುದು, ಆದರೆ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಆದೇಶಿಸುವಂತಿಲ್ಲ ಎಂಬ ಕಮಲನಾಥ್ ಪರ ವಕೀಲರ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News