ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ: ಆರ್‌ಬಿಐ ಗವರ್ನರ್

Update: 2020-04-13 16:55 GMT

ಹೊಸದಿಲ್ಲಿ, ಎ.13: ಕೊರೋನ ವೈರಸ್ ಹಾವಳಿಯಿಂದ ಅರ್ಥವ್ಯವಸ್ಥೆಯ ಮೇಲೆ ಉಂಟಾಗಿರುವ ವ್ಯತಿರಿಕ್ತ ಪರಿಣಾಮವನ್ನು ತಗ್ಗಿಸಲು ಮತ್ತು ಅಭಿವೃದ್ಧಿಗೆ ಚೇತರಿಕೆ ನೀಡಿ ಆರ್ಥಿಕ ಸ್ಥಿರತೆಯನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ . ಸಭೆಯಲ್ಲಿ ರೆಪೊ ದರವನ್ನು 4.4%ಕ್ಕೆ ಕಡಿತಗೊಳಿಸುವ ನಿರ್ಧಾರದ ಜೊತೆಗೆ, ನಗದು ಮೀಸಲು ಅನುಪಾತದಲ್ಲಿ (ಸಿಎಸ್‌ಆರ್) 100 ಮೂಲ ಅಂಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.

ಕಳೆದ 15 ದಿನಗಳಲ್ಲಿ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ನಿಯಮದಿಂದ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿ ಏಕಾಏಕಿ ಹದಗೆಟ್ಟಿದೆ ಎಂದು ಸಭೆಯ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ವ್ಯಾಪಕ ಶ್ರೇಣಿಯ ಉದ್ದೇಶಿತ ಕಾರ್ಯನೀತಿಯನ್ನು ಜಾರಿಗೊಳಿಸಿದೆ. ಆದರೂ , 2008ರಲ್ಲಿ ಕಂಡುಬಂದಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತಲೂ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತ(ಕುಸಿತ)ದ ಸಂಭವನೀಯತೆ ಹೆಚ್ಚಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್‌ನ ಹಾವಳಿ ಮತ್ತು ದೇಶದಲ್ಲಿ ಇದರ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ಲಾಕ್‌ಡೌನ್ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ನಿರೀಕ್ಷೆಯನ್ನು ಬುಡಮೇಲುಗೊಳಿಸಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News