×
Ad

ಸಣ್ಣ,ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ 50,000 ಕೋ.ರೂ. ಘೋಷಿಸಿದ ಆರ್‌ಬಿಐ

Update: 2020-04-17 11:07 IST

ಹೊಸದಿಲ್ಲಿ, ಎ.17: ಕೊರೋನ ವೈರಸ್‌ನಿಂದ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ 50,000 ಕೋ.ರೂ., ಮೈಕ್ರೊ ಫೈನಾನ್ಸ್‌ಗೆ 50,000 ಕೋ.ರೂ.,ಕೋವಿಡ್ ವಿರುದ್ಧ ಹೋರಾಟಕ್ಕೆ ಎಲ್ಲ ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ ನೀಡಲು ನಿರ್ಧರಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದೇಶ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹಲವು ಪ್ರಮುಖ ಹೆಜ್ಜೆಗಳನ್ನು ಘೋಷಿಸಿದರು.

ಆರ್‌ಬಿಐನಿಂದ ಬ್ಯಾಂಕ್‌ಗಳು ಪಡೆಯುವ ಹಣಕ್ಕೆ ನೀಡುವ ಬಡ್ಡಿ ಇಳಿಕೆಗೆ ನಿರ್ಧರಿಸಿರುವ ಆರ್‌ಬಿಐ ರಿವರ್ಸ್ ರೆಪೋ ದರವನ್ನು ಶೇ.3.75ಕ್ಕೆ ಇಳಿಸಿದೆ.

ರೈತರಿಗೆ ನೆರವಾಗಲು ನಬಾರ್ಡ್‌ಗೆ 25,000 ಕೋ.ರೂ., ವಸತಿ ವ್ಯವಸ್ಥೆಗಳಿಗೆ ನ್ಯಾಶನಲ್ ಹೌಸಿಂಗ್ ಬ್ಯಾಂಕಿಂಗ್‌ಗೆ 10,000 ಕೋ.ರೂ. ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ(ಎಸ್‌ಐಡಿಬಿಐ)15,000 ಕೋ.ರೂ.ನೀಡಲಾಗುವುದು ಎಂದು ಆರ್‌ಬಿಐ ಗವರ್ನರ್ ದಾಸ್ ತಿಳಿಸಿದ್ದಾರೆ.

ಶೇ.91ರಷ್ಟು ಎಟಿಎಂಗಳು ಕಾರ್ಯನಿರ್ವಹಿಸಲಿದ್ದು, ಸಮರ್ಪಕ ಹಣದ ಹರಿವಿನ ಮೂಲಕ ಬ್ಯಾಂಕ್‌ಗಳಿಗೆ ಹಣದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಪ್ರಸ್ತುತ ಚಾಲ್ತಿಯಲ್ಲಿರುವ ಸಾಲಗಳ ಪಾವತಿ ಮೇಲೆ ಬ್ಯಾಂಕ್‌ಗಳು ನೀಡಿರುವ ತಾತ್ಕಾಲಿಕ ತಡೆಗೆ 90 ದಿನಗಳ ಎನ್‌ಪಿಎ(ಪಡೆದಿರುವ ಸಾಲ ಮರು ಪಾವತಿ)ನಿಯಮ ಅನ್ವಯವಾಗುವುದಿಲ್ಲ ಎಂದು ದಾಸ್ ಹೇಳಿದ್ದಾರೆ.

ಭಾರತ ಶೇ.1.9ರಷ್ಟು ಬೆಳವಣಿಗೆ ಕಾಣಲಿದೆ: ಆರ್‌ಬಿಐ

ಭಾರತ ಶೇ.1.9ರಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಅಂದಾಜು ಮಾಡಿದೆ. ಇದು ಜಿ-20 ಆರ್ಥಿಕತೆಗಳ ಪೈಕಿ ಅತ್ಯಂತ ಹೆಚ್ಚು. ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯಲಿದೆ. ಕಚ್ಚಾ ತೈಲಗಳ ದರಗಳಲ್ಲಿ ವ್ಯತ್ಯಾಸವಾಗಲಿದೆ. ಸಕಾರಾತ್ಮಕ ಆರ್ಥಿಕತೆ ಕಂಡುಬರಲಿದೆ. ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಐಎಂಎಫ್ ಅಂದಾಜಿನ ಪ್ರಕಾರ 2020-21ರಲ್ಲಿ ಭಾರತದ ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News