ಕೊರೋನ ಬಗ್ಗೆ ದ್ವೇಷದ ಟ್ವೀಟ್ ಮಾಡಿದ ಬಬಿತಾ ಫೋಗಟ್: #SuspendBabitaPhogat ಟ್ರೆಂಡಿಂಗ್
ಹೊಸದಿಲ್ಲಿ: ಕೊರೋನ ವೈರಸ್ ಬಗ್ಗೆ ದ್ವೇಷದ ಟ್ವೀಟ್ ಮಾಡಿದ ಕುಸ್ತಿಪಟು, ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಬಬಿತಾ ಫೋಗಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಭಾರತದಲ್ಲಿ ಕೊರೋನ ವೈರಸ್ ಎರಡನೆ ಅತಿ ದೊಡ್ಡ ಸಮಸ್ಯೆಯಾಗಿದ್ದು, ‘ಅನಾಗರಿಕ ಜಮಾತ್’ ಮೊದಲ ಸಮಸ್ಯೆ ಎಂದು ಬಬಿತಾ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಬಾಲಿವುಡ್ ನಟಿ ಕಂಗನಾ ರಾಣವತ್ ಸಹೋದರಿ ರಂಗೋಲಿ ವಿವಾದಾತ್ಮಕ ಟ್ವೀಟ್ ಮಾಡಿದ ನಂತರ ಬಬಿತಾ ಈ ಟ್ವೀಟ್ ಮಾಡಿದ್ದರು. ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ರಂಗೋಲಿ ಟ್ವಿಟರ್ ಖಾತೆ ಅಮಾನತುಗೊಂಡಿತ್ತು.
ಬಬಿತಾ ದ್ವೇಷದ ಟ್ವೀಟ್ ಮಾಡುತ್ತಲೇ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ರಂಗೋಲಿಯಂತೆಯೇ ಬಬಿತಾರ ಖಾತೆಯನ್ನು ಅಮಾನತುಗೊಳಿಸಬೇಕು ಎಂದು ಟ್ವಿಟರಿಗರು ಆಗ್ರಹಿಸಿದ್ದು, #SuspendBabitaPhogat ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.
ತೀವ್ರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಬಿತಾ, “ಕೆಲ ದಿನಗಳ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಇದಾದ ನಂತರ ನನಗೆ ಹಲವರು ಫೇಸ್ ಬುಕ್ ಮೆಸೆಂಜರ್, ವಾಟ್ಸ್ಯಾಪ್ ಮತ್ತು ಟ್ವಿಟರ್ ಗಳಲ್ಲಿ ತಪ್ಪು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನನ್ನನ್ನು ನಿಂದಿಸುತ್ತಿದ್ದಾರೆ. ಕೆಲವರು ಕರೆಗಳನ್ನು ಮಾಡಿ ಬೆದರಿಸುತ್ತಿದ್ದಾರೆ. ಆದರೆ ನಿಮ್ಮ ಬೆದರಿಕೆಗಳಿಗೆ ಹೆದರಲು ನಾನು ಝೈರಾ ವಾಸಿಂ ಅಲ್ಲ” ಎಂದಿದ್ದಾರೆ.
ಬಬಿತಾರ ಈ ಹೇಳಿಕೆ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದು, ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.
यदि आप बबीता फोगाट को सपोर्ट करते हैं तो उन तक यह बात जरूर पहुंचा दीजिए और उनको बोलिए ध्यान से कान खोल कर सुन लें। pic.twitter.com/gqec3lQwPE
— Babita Phogat (@BabitaPhogat) April 17, 2020