ಕೋಟಾದಲ್ಲಿನ ಬಿಹಾರ ವಿದ್ಯಾರ್ಥಿಗಳನ್ನು ವಾಪಸ್ ಕರೆತರದ ನಿತೀಶ್ ಸರಕಾರಕ್ಕೆ ಆರ್ ಜೆಡಿ ತರಾಟೆ

Update: 2020-04-18 12:45 GMT

ಪಾಟ್ನಾ: ರಾಜಸ್ಥಾನದ ಕೋಟಾದಲ್ಲಿರುವ ತನ್ನ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಪಕ್ಷ ರಾಷ್ಟ್ರೀಯ ಜನತಾ ದಳದಿಂದ ತರಾಟೆಗೆ ಒಳಗಾಗಿದ್ದಾರೆ. ಅಚ್ಚರಿಯೆಂದರೆ ಆರ್ ಜೆಡಿಯ ಮಿತ್ರ ಪಕ್ಷ ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಸರಕಾರದ ಜತೆ ನಿಂತಿದೆ.

ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಲಾಕ್‍ಡೌನ್‍ ನಿಂದಾಗಿ ಕೋಟಾದಲ್ಲಿ ಸಿಲುಕಿದ್ದ ತಮ್ಮ ರಾಜ್ಯದ ಸುಮಾರು 7,500 ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಕೋಚಿಂಗ್ ಸೆಂಟರ್‍ಗಳ ರಾಜಧಾನಿಯೆಂದೇ ತಿಳಿಯಲಾದ ಕೋಟಾದಿಂದ ವಾಪಸ್ ಕರೆತರಲು 250 ಬಸ್‍ಗಳ ವ್ಯವಸ್ಥೆ ಮಾಡಿದ ನಂತರ ನಿತೀಶ್ ಕುಮಾರ್ ಆರ್‍ಜೆಡಿಯಿಂದ ತರಾಟೆಗೊಳಗಾಗಿದ್ದಾರೆ.

ರಾಜ್ಯದ ಹೊರಗಿರುವ ರಾಜ್ಯದ ವಿದ್ಯಾರ್ಥಿಗಳು ಹಾಗೂ ವಲಸಿಗ ಕಾರ್ಮಿಕರ ವಿಚಾರದಲ್ಲಿ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.

ಆದರೆ ರಾಜಸ್ಥಾನ ಸರಕಾರವೇ ಕೋಟಾದಲ್ಲಿರುವ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಬೇಕೆಂದು ಬಿಹಾರ ಸರಕಾರ ವಾದಿಸುತ್ತಿದೆ. ಅವರನ್ನು ವಾಪಸ್ ಕರೆತರುವುದು ಲಾಕ್‍ಡೌನ್ ನಿಯಮಗಳ ಉಲ್ಲಂಘನೆಯಾಗಲಿದೆ ಎಂದೂ ಅದು ಹೇಳಿದೆ. ರಾಜ್ಯದ ಹೊರಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಸಾಧ್ಯ ಸಹಾಯ ಒದಗಿಸಲು ಸರಕಾರ ಶ್ರಮಿಸುವುದಾಗಿ ಟಿವಿ ಸಂದೇಶದಲ್ಲಿ ಶನಿವಾರ ಮುಖ್ಯಮಂತ್ರಿ ನಿತೀಶ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಸರಕಾರಗಳಿಗೆ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಸಾಮಥ್ರ್ಯವಿದ್ದರೆ ಬಿಜೆಪಿ ಜತೆ ಮೈತ್ರಿ ಹೊಂದಿರುವ ಬಿಹಾರ ಸರಕಾರಕ್ಕೆ ಏಕೆ ಸಾಧ್ಯವಿಲ್ಲ ಎಂಬುದು ಆರ್‍ಜೆಡಿ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News