ಧರ್ಮ, ಜಾತಿಗಳನ್ನು ನೋಡಿ ಕೊರೋನವೈರಸ್ ದಾಳಿ ಮಾಡುವುದಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ,ಎ.19: ಕೊರೋನ ವೈರಸ್ ಪಿಡುಗು ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘ಕೋವಿಡ್-19 ದಾಳಿಯಿಡುವ ಮುನ್ನ ಜನಾಂಗ,ಧರ್ಮ,ಬಣ್ಣ,ಜಾತಿ,ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ. ಆ ಬಳಿಕ ಏಕತೆ ಮತ್ತು ಭ್ರಾತೃತ್ವಕ್ಕೆ ಆದ್ಯತೆಯನ್ನು ನೀಡುವುದು ನಮ್ಮ ಪ್ರತಿಕ್ರಿಯೆ ಮತ್ತು ನಡವಳಿಕೆಯಾಗಬೇಕು ’ ಎಂದು ಶನಿವಾರ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅವರು ಬರೆದಿದ್ದಾರೆ.
"ಇದು ದೇಶಗಳು ಅಥವಾ ಸಮಾಜಗಳು ಪರಸ್ಪರ ಮುಖ ತಿರುಗಿಸಿಕೊಂಡಂತಹ ಇತಿಹಾಸದಲ್ಲಿನ ಹಿಂದಿನ ಸಂದರ್ಭಗಳಂತಲ್ಲ. ಇಂದು ನಾವೆಲ್ಲ ಒಂದಾಗಿ ಸಮಾನ ಸವಾಲಿನ ವಿರುದ್ಧ ಹೋರಾಡುತ್ತಿದ್ದೇವೆ. ಭವಿಷ್ಯವು ಒಗ್ಗಟ್ಟು ಮತ್ತು ಪುಟಿದೇಳುವಿಕೆಯ ಕುರಿತಾಗಿರುತ್ತದೆ" ಎಂದಿರುವ ಅವರು,ಭಾರತದ ಮುಂದಿನ ಬೃಹತ್ ಪರಿಕಲ್ಪನೆಗಳು ಜಾಗತಿಕ ಪ್ರಸ್ತುತತೆ ಮತ್ತು ಅನ್ವಯತೆಯನ್ನು ಪಡೆಯಬೇಕು. ಅವು ಭಾರತಕ್ಕೆ ಮಾತ್ರವಲ್ಲ,ಇಡೀ ಮನುಕುಲಕ್ಕೆ ಧನಾತ್ಮಕ ಬದಲಾವಣೆಯನ್ನು ತರುವ ಸಾಮರ್ಥ್ಯ ಹೊಂದಿರಬೇಕು ಎಂದಿದ್ದಾರೆ.