ಸಿಎಎ ಪ್ರತಿಭಟನೆ: ಬಂಧಿತ ಜಾಮಿಯಾ ವಿದ್ಯಾರ್ಥಿಗಳ ಬಿಡುಗಡೆಗೆ ಚಿತ್ರರಂಗದ ಗಣ್ಯರ ಆಗ್ರಹ

Update: 2020-04-19 16:34 GMT
ಫೈಲ್  ಚಿತ್ರ

ಹೊಸದಿಲ್ಲಿ,ಎ.19: ಸಿಎಎ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಕ್ಕಾಗಿ ದಿಲ್ಲಿ ಪೊಲೀಸರಿಂದ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರ ಬಂಧನಗಳ ವಿರುದ್ಧ ಅನುರಾಗ್ ಕಶ್ಯಪ್, ವಿಶಾಲ ಭಾರದ್ವಾಜ, ಮಹೇಶ ಭಟ್ ಮತ್ತು ರತ್ನಾ ಪಾಠಕ್ ಶಾ ಸೇರಿದಂತೆ ಚಿತ್ರರಂಗದ 20ಕ್ಕೂ ಅಧಿಕ ಗಣ್ಯರು ರವಿವಾರ ಹೇಳಿಕೆಯೊಂದನ್ನು ಹೊರಡಿಸಿದ್ದು,ಅವರನ್ನು ಬಿಡುಗಡೆಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದ್ದ ಆರೋಪದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳಾದ ಮೀರಾನ್ ಹೈದರ್ ಮತ್ತು ಸಫೂರಾ ಝರ್ಗಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೋನ ವೈರಸ್ ಬಿಕ್ಕಟ್ಟು ಮತ್ತು ಲಾಕ್‌ಡೌನ್‌ನಿಂದಾಗಿ ದೇಶವು ತತ್ತರಿಸುತ್ತಿದೆ. ಸೋಂಕು ಹರಡುವುದನ್ನು ತಡೆಯಲು ತಮ್ಮ ಮನೆಗಳಲ್ಲಿಯೇ ಇರುವಂತೆ ಜನರಿಗೆ ಸೂಚಿಸಲಾಗಿದೆ. ಇಂತಹ ಘೋರ ಸ್ಥಿತಿಯ ನಡುವೆಯೇ ದಿಲ್ಲಿ ಪೊಲೀಸರು ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಇಬ್ಬರು ಜಾಮಿಯಾ ವಿದ್ಯಾರ್ಥಿಗಳು ಮತ್ತು ಈಶಾನ್ಯ ದಿಲ್ಲಿಯ ಹಲವಾರು ಸಾಮಾಜಿಕ ಹೋರಾಟಗಾರ ರನ್ನು ಬಂಧಿಸಿರುವುದು ಆಘಾತವನ್ನುಂಟು ಮಾಡಿದೆ ಎಂದು ಚಿತ್ರರಂಗದ ಗಣ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಹೇರಲಾಗಿರುವ ದೇಶವ್ಯಾಪಿ ಲಾಕ್‌ಡೌನ್ ನಾಗರಿಕರ ಹಕ್ಕುಗಳ ಮೇಲಿನ ಲಾಕ್‌ಡೌನ್ ಆಗಲು ಸಾಧ್ಯವಿಲ್ಲ ಮತ್ತು ಲಾಕ್‌ಡೌನ್ ಅನ್ನು ಅಧಿಕಾರಿಗಳು ಈ ರೀತಿಯಲ್ಲಿ ದುರುಪಯೋಗ ಮಾಡಕೂಡದು. ಅಲ್ಪಸಂಖ್ಯಾತರು ಗರಿಷ್ಠ ಜೀವಹಾನಿ ಮತ್ತು ಜೀವನೋಪಾಯ ನಷ್ಟವನ್ನು ಅನುಭವಿಸಿದ ಫೆ.23ರಿಂದ 26ವರೆಗೆ ಈಶಾನ್ಯ ದಿಲ್ಲಿಯಲ್ಲಿ ನಡೆದ ದಂಗೆಗಳು ಈಗ ಸಾಮಾಜಿಕ ಹೋರಾಟಗಾರರ ವಿರುದ್ಧ ಪ್ರತೀಕಾರಕ್ಕೆ ದಿಲ್ಲಿ ಪೊಲೀಸರಿಗೆ ನೆಪವಾಗುತ್ತಿವೆ. ಈ ಹೋರಾಟಗಾರರಲ್ಲಿಯೂ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿ ದ್ದಾರೆ ಎಂದು ತಿಳಿಸಿರುವ ಹೇಳಿಕೆಯು,ಕೊರೋನ ವೈರಸ್ ಬಿಕ್ಕಟ್ಟಿನ ನಡುವೆ ಪೊಲೀಸರ ಕ್ರಮಗಳು ಅತ್ಯಂತ ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದು ಬಣ್ಣಿಸಿದೆ.

ಸಂವಿಧಾನವು ಪ್ರಜೆಗಳಿಗೆ ಪ್ರತಿಭಟಿಸುವ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ ಎಂದಿರುವ ಹೇಳಿಕೆಯು,ದೇಶದ ಮತ್ತು ವಿಶ್ವದ ಬಹಳಷ್ಟು ಜನರು ಕರಾಳ ಪೌರತ್ವ ಕಾಯ್ದೆಯನ್ನು ಖಂಡಿಸಿದ್ದಾರೆ. ಸಿಎಎ ಧರ್ಮಾಂಧತೆಯಿಂದ ಕೂಡಿದೆ ಮತ್ತು ದೇಶದ ಜಾತ್ಯತೀತ ಸ್ವರೂಪವನ್ನು ನಾಶಗೊಳಿಸುತ್ತಿದೆ ಎಂದು ನಾವು ಪರಿಗಣಿಸಿರುವುದರಿಂದ ಅದಕ್ಕೆ ನಮ್ಮ ವಿರೋಧವು ಮುಂದುವರಿಯಲಿದೆ. ಸಿಎಎ/ಎನ್‌ಆರ್‌ಸಿ/ಎನ್‌ಪಿಆರ್ ವಿರುದ್ಧ ಪ್ರತಿಭಟಿಸಲು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡಿದ್ದ ಕಾರಣಕ್ಕೆ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರ ವಿರುದ್ಧ ಇಂತಹ ಪ್ರತೀಕಾರದ ಕ್ರಮಗಳನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News