ಕೊರೋನ ವೈರಸ್: ಅಮೆರಿಕದಲ್ಲಿ ಆಹಾರಕ್ಕಾಗಿ ಹಾಹಾಕಾರ
Update: 2020-04-19 22:24 IST
ನ್ಯೂಯಾರ್ಕ್,ಎ.19: ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿನ ತಾಂಡವ ಮುಂದುವರಿದಿರುವಂತೆಯೇ, ಅಲ್ಲಿ ಆಹಾರದ ಕೊರತೆಯೂ ತಲೆದೋರಿದೆ.
ಕೆಲವು ಕಡೆ ಸಂತ್ರಸ್ತರಿಗಾಗಿ ಸ್ಥಾಪಿಸಲಾಗಿರುವ ಅಹಾರ ವಿತರಣೆ ಮಳಿಗೆಗಳು ಬರಿದಾಗಿದ್ದರೆ, ಇನ್ನು ಕೆಲವು ಕಡೆ ಸಾವಿರಾರು ಅಮೆರಿಕನ್ನರು ಮೈಲುಗಟ್ಟಲೆಯುದ್ದಕ್ಕೂ ಕಾರುಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ, ಉಚಿತ ಆಹಾರಕ್ಕಾಗಿ ಕಾದು ನಿಂತಿರುವ ದೃಶ್ಯ ದೇಶಾದ್ಯಂತ ಕಂಡುಬರುತ್ತಿದೆ.
ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಅಮೆರಿಕದ ಹಲವೆಡೆ ಲಾಕ್‌ಡೌನ್ ಘೋಷಿಸಿರುವ ಬೆನ್ನಲ್ಲೇ, 2 ಕೋಟಿಗೂ ಅಧಿಕ ಮಂದಿ ನಿರುದ್ಯೋಗಿಗಳಾಗಿದ್ದಾರೆ.
ಪೆನ್ಸಿಲ್ವೇನಿಯಾದ ಗ್ರೇಟರ್ ಪಿಟ್ಸ್‌ಬರ್ಗ್ ಸಾಮುದಾಯಿಕ ಆಹಾರ ಬ್ಯಾಂಕ್ ಸ್ಥಾಪಿಸಿರುವ ಆಹಾರ ವಿತರಣಾ ಕೇಂದ್ರದಲ್ಲಿ ಆಹಾರದ ಪೊಟ್ಟಣಗಳನ್ನು ಪಡೆದುಕೊಳ್ಳಲು 1 ಸಾವಿರಕ್ಕೂ ಅಧಿಕ ಕಾರುಗಲ್ಲಿ ಜನರು ಸಾಲುಗಟ್ಟಿ ಕಾಯುತ್ತಿರುವುದು ಕಂಡುಬಂದಿದೆ.