ದಿಲ್ಲಿ: ಕ್ವಾರಂಟೈನ್ ಕೇಂದ್ರದ ನಿರ್ವಹಣೆಗೆ ಹೆಗಲು ನೀಡಿದ ಭೂಸೇನೆಯ ವೈದ್ಯಕೀಯ ತಂಡ

Update: 2020-04-19 18:34 GMT

ಹೊಸದಿಲ್ಲಿ, ಎ.19: ವಾಯುವ್ಯ ದಿಲ್ಲಿಯ ನರೇಲ ಪಟ್ಟಣದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 1 ತಿಂಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗೆ ಇದೀಗ ತುಸು ವಿರಾಮ ದೊರಕಿದೆ. ಈಗ ಸೇನೆಯ ವೈದ್ಯಕೀಯ ವಿಭಾಗ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ದಿಲ್ಲಿ ಸರಕಾರದ ನೆರವಿಗೆ ಧಾವಿಸಿದೆ.

ಸೇನೆಯ ವೈದ್ಯರ ತಂಡದಲ್ಲಿ 40 ಸದಸ್ಯರಿದ್ದು ಇವರಲ್ಲಿ 6 ವೈದ್ಯಕೀಯ ಅಧಿಕಾರಿಗಳು, 18 ಪ್ಯಾರಾಮೆಡಿಕಲ್ ಸಿಬ್ಬಂದಿಗಳಿದ್ದಾರೆ. ಸೇನೆಯ ವೈದ್ಯರ ತಂಡದವರ ವೃತ್ತಿಪರ ಸೇವೆ ಕ್ವಾರಂಟೈನ್ ಕೇಂದ್ರದಲ್ಲಿರುವ ಎಲ್ಲಾ ಸದಸ್ಯರ ಮನಗೆದ್ದಿದೆ. ಸೇನೆಯ ವೈದ್ಯರ ತಂಡದವರು ದಿನದ 12 ಗಂಟೆ ಕರ್ತವ್ಯದ ಹೊಣೆ ಹೊತ್ತಿರುವುದರಿಂದ , ರಾತ್ರಿ ಸಂದರ್ಭ ದಿಲ್ಲಿ ಸರಕಾರಿ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಯಾವುದೇ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸಲು ಅನುಕೂಲವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ನರೇಲದ ಕ್ವಾರಂಟೈನ್ ಕೇಂದ್ರದ ಸುಗಮ ಕಾರ್ಯನಿರ್ವಹಣೆಗೆ ನಾಗರಿಕ ಆಡಳಿತದೊಂದಿಗೆ ಸೇನೆಯ ವೈದ್ಯರು ಅಸಾಧಾರಣ ಹೊಂದಾಣಿಕೆಯಿಂದ ನೆರವಾಗುತ್ತಿದ್ದಾರೆ. ಕೊರೋನ ಸೋಂಕಿನ ವಿರುದ್ಧದ ಈ ಸಮರದಲ್ಲಿ ಪ್ರಜೆಗಳ ಸುರಕ್ಷತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಸೇನೆಯು ಹೃತ್ಪೂರ್ವಕವಾಗಿ ಕೈಜೋಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ದೇಶದ ಬೃಹತ್ ಕ್ವಾರಂಟೈನ್ ಕೇಂದ್ರಗಳಲ್ಲಿ ಒಂದಾಗಿರುವ ನರೇಲ ಕ್ವಾರಂಟೈನ್ ಕೇಂದ್ರದಲ್ಲಿ ಆರಂಭದಲ್ಲಿ 250 ವಿದೇಶಿ ಪ್ರಜೆಗಳನ್ನು ಇರಿಸಲಾಗಿತ್ತು. ಬಳಿಕ 1000ಕ್ಕೂ ಹೆಚ್ಚು ಕೊರೋನ ವೈರಸ್ ಶಂಕಿತರನ್ನು ಇಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರಲ್ಲಿ 932 ಪ್ರಕರಣ ದಿಲ್ಲಿಯಲ್ಲಿ ನಡೆದ ತಬ್ಲೀಗಿ ಜಮಾಅತ್‌ಗೆ ಸಂಬಂಧಿಸಿದ್ದು ಇವರಲ್ಲಿ 367 ಸದಸ್ಯರಲ್ಲಿ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News