ಲಾಕ್‍ಡೌನ್‍ನಿಂದ ಅತಂತ್ರವಾಗಿದ್ದ ಮುಂಬೈ ನಿವಾಸಿಗಳಿಗೆ 1 ತಿಂಗಳಿನಿಂದ ಆಶ್ರಯ ನೀಡುತ್ತಿರುವ ಕಾಶ್ಮೀರಿ ಕುಟುಂಬ
ಪುಲ್ವಾಮ: ಕೇಸರಿ ಉತ್ಪಾದನೆಗೆ ಪ್ರಸಿದ್ಧವಾಗಿರುವ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಾಂಪೋರ್ ಎಂಬ ನಗರದ ಕಾಶ್ಮೀರಿ ಕುಟುಂಬವೊಂದು ಕಳೆದೊಂದು ತಿಂಗಳಿನಿಂದ ಲಾಕ್ ಡೌನ್ ನಿಂದಾಗಿ ಮುಂಬೈಗೆ ತೆರಳಲಾರದೆ ಸಂಕಷ್ಟ ಸ್ಥಿತಿಯಲ್ಲಿದ್ದ ತಾಯಿ-ಮಗನಿಗೆ ಆಶ್ರಯ ಒದಗಿಸಿ ಔದಾರ್ಯ ಮೆರೆದಿದೆ.
ಪಾಂಪೋರ್‍ನ ಪಟಾಲ್ ಬಾಘ್ ಎಂಬಲ್ಲಿನ ನಝೀರ್ ಅಹ್ಮದ್ ಶೇಖ್ ಅವರೇ ಮುಂಬೈಯ ತಾಯಿ-ಮಗನಿಗೆ ಆಶ್ರಯ ನೀಡಿದವರು. ಅವರ ಮನೆಯಲ್ಲಿ ಆಶ್ರಯ ಪಡೆದಿರುವ ಮುಂಬೈ ಮಲಾಡ್ ನಿವಾಸಿ 50 ವರ್ಷದ ಖತೀಜಾ ಶೇಖ್ ಇಲ್ಲಿ ಇದ್ದ ಸಮಯ ಅಲ್ಪಸ್ವಲ್ಪ ಕಾಶ್ಮೀರಿ ಕಲಿತಿದ್ದಾರೆ ಹಾಗೂ ಕುಟುಂಬದವರು ಹಾಗೂ ನೆರೆಹೊರೆಯವರೊಂದಿಗೆ ಸ್ನೇಹದಿಂದ ಮಾತನಾಡುತ್ತಾರೆ.
ಕಳೆದ ತಿಂಗಳು ಕಾಶ್ಮೀರ ಪ್ರವಾಸಕ್ಕೆ ಆಗಮಿಸಿದ್ದ ಅವರು ಮಾರ್ಚ್ 24ರಂದು ಲಾಕ್ ಡೌನ್ ಘೋಷಣೆಯಾದ ನಂತರ ಅತಂತ್ರರಾಗಿದ್ದರು. ಖತೀಜಾ ಅವರ ಪುತ್ರ, ಜಾವಿದ್ ರಶೀದ್ ಶೇಖ್ (30) ತಮ್ಮದೇ ಸ್ವಂತ ಉದ್ಯಮ ಹೊಂದಿದ್ದಾರೆ.
“ಲಾಕ್ ಡೌನ್ ಕ್ರಮ ಸರಿಯಾಗಿದೆ. ಆದರೆ ಅದರ ಹಠಾತ್ ಜಾರಿಯಿಂದಾಗಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳುವ ಅವರು ತಮ್ಮನ್ನು ಕೊರೋನ ಪರೀಕ್ಷೆಗೊಳಪಡಿಸಲಾಗಿದೆ. ಅದೃಷ್ಟವಶಾತ್ ವರದಿಗಳು ನೆಗೆಟಿವ್ ಬಂದಿದೆ” ಎಂದಿದ್ದಾರೆ.
ಪರೀಕ್ಷೆ ಫಲಿತಾಂಶದ ನಂತರ ಒಂದೋ ಹೊರಟು ಹೋಗುವಂತೆ ಇಲ್ಲವೇ ಕ್ವಾರಂಟೈನಿಗೊಳಗಾಗುವಂತೆ ಹೇಳಿದ್ದರಿಂದ ಇಬ್ಬರಿಗೂ ಎಲ್ಲಿ ಹೋಗುವುದೆಂದು ತಿಳಿಯದೇ ಇದ್ದಾಗ ಪಿಡಬ್ಲ್ಯುಡಿ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ನಝೀರ್ (55) ಆಪತ್ಬಾಂಧವರಂತೆ ಬಂದಿದ್ದರು. ನಝೀರ್ ತಮ್ಮ ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರ ಜತೆಗೆ ವಾಸಿಸುತ್ತಿದ್ದು ನಝೀರ್ ಕುಟುಂಬ ಖತೀಜಾ ಮತ್ತು ಅವರ ಪುತ್ರನನ್ನು ತಮ್ಮ ಕುಟುಂಬ ಸದಸ್ಯರಂತೆಯೇ ನೋಡಿಕೊಂಡಿದೆ.
“ಪ್ರತಿ ದಿನ ಮಲಗುವ ಮುನ್ನ ನಝೀರ್ ಪತ್ನಿ ನಮಗೆ ದೊಡ್ಡ ಗ್ಲಾಸಿನಲ್ಲಿ ಹಾಲು ನೀಡುತ್ತಾರೆ. ಅವರ ಪುತ್ರರು ಈಗ ನನ್ನ ಸೋದರರಂತೆಯೇ ಆಗಿದ್ದಾರೆ'' ಎಂದು ಜಾವಿದ್ ಹೇಳುತ್ತಾರೆ. ಖತೀಜಾಗೆ ಹಲ್ಲಿನ ಸಮಸ್ಯೆ ಕಾಣಿಸಿಕೊಂಡಾಗ ನಝೀರ್ ಅವರೇ ಆಕೆಯನ್ನು ಹಲವು ವೈದ್ಯರ ಬಳಿ ಕರೆದೊಯ್ದಿದ್ದಾರೆ.
ಮುಂಬೈಯಲ್ಲಿರುವ ಖತೀಜಾ ಕುಟುಂಬ ಸದಸ್ಯರು ಅವರು ಆದಷ್ಟು ಬೇಗ ವಾಪಸ್ ಬಲಿ ಎಂದು ಹಾರೈಸುತ್ತಿದ್ದಾರೆ, ನಝೀರ್ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಆತಿಥ್ಯ ನೀಡಬೇಕೆಂದೂ ಅವರು ಬಯಸಿದ್ದಾರೆ.
ಕೃಪೆ: thewire.in