'ದೇಶ ವಿರೋಧಿ’ ಪೋಸ್ಟ್ ಆರೋಪ: ಕಾಶ್ಮೀರಿ ಪತ್ರಕರ್ತೆಯ ವಿರುದ್ಧ ಯುಎಪಿಎ ಕಾಯ್ದೆ

Update: 2020-04-20 11:14 GMT

ಶ್ರೀನಗರ: ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ‘ದೇಶ ವಿರೋಧಿ ಪೋಸ್ಟ್'ಗಳನ್ನು ಹಾಕಿದ ಆರೋಪದಲ್ಲಿ ಕಾಶ್ಮೀರದ ಮಹಿಳಾ ಪತ್ರಕರ್ತರಾದ ಮಸ್ರತ್ ಝಹ್ರಾ ವಿರುದ್ಧ ಅಲ್ಲಿನ ಪೊಲೀಸರು ಅತ್ಯಂತ ಕಠಿಣ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನು (ಯುಎಪಿಎ) ಹೇರಿದ್ದಾರೆ.

ಕಾಶ್ಮೀರದ ಸೈಬರ್ ಪೊಲೀಸ್ ಠಾಣೆಯಲ್ಲಿ ಕಾಯಿದೆಯ ಸೆಕ್ಷನ್ 13 ಹಾಗೂ ಐಪಿಸಿಯ ಸೆಕ್ಷನ್ 505 ಅನ್ವಯ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಪ್ಪತ್ತಾರು ವರ್ಷದ ಝಹ್ರಾ ಫ್ರೀಲಾನ್ಸ್ ಫೋಟೋಜರ್ನಲಿಸ್ಟ್ ಆಗಿದ್ದಾರೆ ಹಾಗೂ ವಿವಿಧ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ತಾವು ತೆಗೆದ ಛಾಯಾಚಿತ್ರ ಹಾಗೂ ವರದಿಗಳನ್ನು ನೀಡುತ್ತಾರೆ. ಆಕೆ ತೆಗೆದ ಛಾಯಾಚಿತ್ರಗಳು ಹಾಗೂ ಆಕೆಯ ವರದಿಗಳು ವಾಷಿಂಗ್ಟನ್ ಪೋಸ್ಟ್, ಅಲ್ ಜಝೀರ, ಕಾರವಾನ್ ಗಳಲ್ಲಿ ಪ್ರಕಟಗೊಂಡಿವೆ.

“ಕ್ರಿಮಿನಲ್ ಉದ್ದೇಶದಿಂದ ಹಾಗೂ ಶಾಂತಿ ಕದಡುವ ರೀತಿಯ ಅಪರಾಧಗಳನ್ನು ಮಾಡಲು ಯುವಜನತೆಯನ್ನು ಪ್ರಚೋದಿಸುವ ದೇಶ ವಿರೋಧಿ ಪೋಸ್ಟ್ ಗಳನ್ನು ಮಸ್ರತ್ ಝಹ್ರಾ ಎಂಬ ಫೇಸ್ ಬುಕ್ ಬಳಕೆದಾರ ಅಪ್‍ಲೋಡ್ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ. ಆಕೆಯ ಪೋಸ್ಟ್‍ಗಳು ಕಾನೂನು ಪಾಲನಾ ಏಜನ್ಸಿಗಳ ಗೌರವಕ್ಕೆ ಧಕ್ಕೆ ತರುವಂತಿವೆ'' ಎಂದು ಪೊಲೀಸರು ಆರೋಪಿಸಿದ್ದಾರೆ.

ಕಾಶ್ಮೀರದ ಪತ್ರಕರ್ತರ ಪೈಕಿ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ಪ್ರಕರಣ ಎದುರಿಸುತ್ತಿರುವ ಎರಡನೆಯವರಾಗಿದ್ದಾರೆ ಝಹ್ರಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News