×
Ad

ಜಾರ್ಖಂಡ್: ಸಂಕಷ್ಟದಲ್ಲಿದ್ದ ವೃದ್ಧೆಗೆ ಕನ್ನಡತಿ ಐಎಎಸ್ ಅಧಿಕಾರಿ ನೆರವಾಗಿದ್ದು ಹೀಗೆ…

Update: 2020-04-20 20:52 IST

ಪಾಟ್ನಾ: ಜಾರ್ಖಂಡ್‍ ನ ದಮ್ಕಾ ಪಟ್ಟಣದಲ್ಲಿ 80 ವರ್ಷದ ವೃದ್ಧೆ ಲಕ್ಷ್ಮೀದೇವಿ ಒಬ್ಬಂಟಿಯಾಗಿ ವಾಸವಿದ್ದಾರೆ. ವೀಲ್‍ ಚೇರ್ ನೆರವಿಲ್ಲದೇ ಓಡಾಡಲಾರದ ಸ್ಥಿತಿ. ಲಾಕ್‍ ಡೌನ್ ಕಾರಣ ತಿನ್ನಲು ಆಹಾರವೂ ಇವರ ಬಳಿ ಇರಲಿಲ್ಲ. ಕೈಯಲ್ಲಿ ಚಿಕ್ಕಾಸೂ ಇರಲಿಲ್ಲ. ಸಂಬಂಧಿಕರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಅವರು ದಮ್ಕಾ ಜಿಲ್ಲಾಧಿಕಾರಿಗೆ ವಿಷಯ ಮುಟ್ಟಿಸಿದರು. ಒಂದು ಗಂಟೆಯ ಒಳಗಾಗಿ ಜಿಲ್ಲಾಡಳಿತದಿಂದ ಇಬ್ಬರು ಅಧಿಕಾರಿಗಳು ಲಕ್ಷ್ಮೀದೇವಿಯ ಮನೆಬಾಗಿಲಲ್ಲಿದ್ದರು. ಜತೆಗೆ ವಾಹನದ ತುಂಬಾ ಅಕ್ಕಿ, ಬೇಳೆ, ಅವಲಕ್ಕಿ, ಕಿತ್ತಳೆ, ಸೇಬು, ದ್ರಾಕ್ಷಿ, ಹಾರ್ಲಿಕ್ಸ್, ಬಿಸ್ಕೆಟ್ ತಂದಿದ್ದರು.

ವೃದ್ಧೆಗೆ ಸಂತಸದಲ್ಲಿ ಮಾತೇ ಹೊರಡಲಿಲ್ಲ. ಬುಡಕಟ್ಟು ಜನಾಂಗದವರೇ ಅಧಿಕ ಇರುವ ಜಾರ್ಖಂಡ್‍ ನಲ್ಲಿ ಸಂಕಷ್ಟದಲ್ಲಿರುವವರ ಬಗ್ಗೆ ಕಾಳಜಿ ವಹಿಸಿದ 2011ನೇ ಬ್ಯಾಚ್ ಐಎಎಸ್ ಅಧಿಕಾರಿ, ಧಮ್ಕಾ ಜಿಲ್ಲಾಧಿಕಾರಿ ಬಿ.ರಾಜೇಶ್ವರಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಗತ್ಯವಿರುವವರಿಗೆ ನಾವು ಕನಿಷ್ಠ ಇಷ್ಟನ್ನಾದರೂ ಮಾಡಬೇಕು ಎಂದು ಮೈಸೂರು ಮೂಲದ ಐಎಎಸ್ ಅಧಿಕಾರಿ ರಾಜೇಶ್ವರಿ ಹೇಳುತ್ತಾರೆ. 1985ರಲ್ಲಿ ಜನಿಸಿದ ಇವರು ಉಡುಪಿ ಹಾಗೂ ಕೊಡಗಿನಲ್ಲಿ ವ್ಯಾಸಂಗ ನಡೆಸಿದ್ದರು.

ಇಡೀ ದಿನ ಜನಸೇವೆಯಲ್ಲಿರುವ ರಾಜೇಶ್ವರಿಯವರು ಮೆಡಿಕಲ್ ಕಾಲೇಜಿನಲ್ಲಿರುವ ವೈರಾಲಜಿ ಲ್ಯಾಬ್ ಪರಿಶೀಲನೆಗೆ ತೆರಳುತ್ತಾರೆ. ಸಂಸ್ಥೆಯ ಪ್ರಯೋಗಾಲಯ ಇನ್ನೂ ಸಜ್ಜಾಗಿಲ್ಲವಾದರೂ, ಆರೋಗ್ಯ ಇಲಾಖೆ ಇಲ್ಲಿ ಕೋವಿಡ್-19 ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ ತ್ವರಿತ ಕಾಮಗಾರಿಗೆ ಸೂಚಿಸುತ್ತಾರೆ. ಬಳಿಕ ಗಾಂಧಿ ಮೈದಾನದ ತರಕಾರಿ ಮಾರುಕಟ್ಟೆಗೆ ತೆರಳಿ, ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಕಾಪಾಡುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಡ್ರೋನ್ ಮೂಲಕ ಕಣ್ಗಾವಲು ಇಡುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸುತ್ತಾರೆ. ಲಾಕ್‍ ಡೌನ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಆದೇಶಿಸಿರುವ ಇವರು ಪ್ರತಿನಿತ್ಯ ಜನರ ಸೇವೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News