ಕೊರೋನ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ವಿರೋಧ: ಘರ್ಷಣೆ

Update: 2020-04-20 17:50 GMT

ಚೆನ್ನೈ, ಎ.20: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಸಂಸ್ಕಾರವನ್ನು ತಮ್ಮ ಪ್ರದೇಶದಲ್ಲಿ ನಡೆಸಲು ಸ್ಥಳೀಯರು ವಿರೋಧಿಸಿದ್ದಲ್ಲದೆ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಚೆನ್ನೈಯಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 55 ವರ್ಷದ ವೈದ್ಯರೊಬ್ಬರು ಸ್ವತಃ ಸೋಂಕಿಗೆ ಒಳಗಾಗಿ ರವಿವಾರ ಮೃತಪಟ್ಟಿದ್ದರು. ವೈದ್ಯರ ಮೃತದೇಹದ ಅಂತ್ಯಸಂಸ್ಕಾರವನ್ನು ಕಿಲ್ಪಾಕ್‌ನ ಟಿಪಿ ಛತ್ರಂ ಸ್ಮಶಾನ ಭೂಮಿಯಲ್ಲಿ ನಡೆಸಲು ಸ್ಥಳೀಯರು ತೀವ್ರವಾಗಿ ವಿರೋಧಿಸಿದರು. ಇದರಿಂದ ಈ ಪ್ರದೇಶಕ್ಕೆ ಕೊರೋನ ಸೋಂಕು ಹರಡಬಹುದು ಎಂಬುದು ಅವರ ವಾದವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬಳಿಕ ಆಸ್ಪತ್ರೆಯ ಸಿಬಂದಿ ಮೃತದೇಹವನ್ನು ಅಣ್ಣಾನಗರದಲ್ಲಿರುವ ವೇಲಾಂಗಡು ಸ್ಮಶಾನ ಭೂಮಿಗೆ ಸಾಗಿಸಿದರು. ಆದರೆ ಅಲ್ಲಿಯೂ ಸುಮಾರು 50ರಷ್ಟು ಸ್ಥಳೀಯರು ಒಟ್ಟು ಸೇರಿ ಶವಸಂಸ್ಕಾರಕ್ಕೆ ವಿರೋಧ ಸೂಚಿಸಿದರು. ಈ ಹಂತದಲ್ಲಿ ಸ್ಥಳೀಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿದೆ. ಘರ್ಷಣೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಮತ್ತು ಆರೋಗ್ಯ ಸೇವೆಯ ಸಿಬ್ಬಂದಿ ಗಾಯಗೊಂಡರು. ನಂತರ ಮೃತದೇಹವನ್ನು ವಾಪಾಸು ತಂದು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಯಿತು. ಮಧ್ಯಾಹ್ನದ ಬಳಿಕ ಮೃತ ವೈದ್ಯರ ಸಂಬಂಧಿಕರು ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ನೆರವಿನಿಂದ ವೇಲಾಂಗಡು ಸ್ಮಶಾನಭೂಮಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಸಿದರು.

ಘಟನೆಯನ್ನು ಖಂಡಿಸಿರುವ ತಮಿಳುನಾಡು ಸರಕಾರಿ ವೈದ್ಯರ ಸಂಘಟನೆಯ ಕಾರ್ಯದರ್ಶಿ ಡಾ. ಎನ್ ರವಿಶಂಕರ್, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 20 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಣ್ಣಾನಗರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News