×
Ad

​ಕೊರೋನ ವೈರಸ್ : ಭಾರತದಲ್ಲಿ ಸತತ ಮೂರನೇ ದಿನ 1200ಕ್ಕೂ ಹೆಚ್ಚು ಪ್ರಕರಣ

Update: 2020-04-21 10:00 IST

ಹೊಸದಿಲ್ಲಿ : ಭಾರತದಲ್ಲಿ ಸತತ ಮೂರನೇ ದಿನ 1200ಕ್ಕೂ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ.

ಸೋಮವಾರ ಒಟ್ಟು 1267 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಪ್ರಮಾಣ ಶೇಕಡ 7.3ರಷ್ಟು ಹೆಚ್ಚಿದಂತಾಗಿದೆ. ರವಿವಾರ ಒಂದೇ ದಿನದಲ್ಲಿ ಶೇಕಡ 10.3ರಷ್ಟು ಹೆಚ್ಚಳ ಕಂಡುಬಂದಿತ್ತು.

ಮಹಾರಾಷ್ಟ್ರದಲ್ಲಿ ಒಂದೇ ದಿನ 466 ಹೊಸ ಪ್ರಕರಣಗಳು ವರದಿಯಾಗಿವೆ. ಗುಜರಾತ್ (196), ರಾಜಸ್ಥಾನ (98) ಮತ್ತು ಉತ್ತರ ಪ್ರದೇಶ (95) ನಂತರದ ಸ್ಥಾನಗಳಲ್ಲಿವೆ. ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ತಲಾ 78 ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,589 ಆಗಿದ್ದು, ಮೃತಪಟ್ಟವರ ಸಂಖ್ಯೆ 595ಕ್ಕೇರಿದೆ. ಸೋಮವಾರ ಒಟ್ಟು 35 ಮಂದಿ ಕೊರೋನಾ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ.

ದೊಡ್ಡ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಸಾಂಕ್ರಾಮಿಕ ಕ್ರಮೇಣ ವ್ಯಾಪಕವಾಗುತ್ತಿದೆ ಎಂಬ ಆತಂಕ ಹೆಚ್ಚಿದೆ. ಮುಂದಿನ ಎರಡು- ಮೂರು ವಾರಗಳಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಐಸಿಎಂಆರ್ ಮುಖ್ಯ ಸಾಂಕ್ರಾಮಿಕ ರೋಗ ತಜ್ಞ ಡಾ. ರಮಣ್ ಗಂಗಖೇಡ್‌ಕರ್ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರ (4666) ಹಾಗೂ ದೆಹಲಿ (2081) ಗರಿಷ್ಠ ಸೋಂಕಿತರಿರುವ ರಾಜ್ಯಗಳಾಗಿದ್ದು, ಗುಜರಾತ್ ಮೂರನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಸೋಮವಾರ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ರಾಜಧಾನಿಯಲ್ಲಿ ಒಟ್ಟು ಬಲಿಯಾದವರ ಸಂಖ್ಯೆ 47ಕ್ಕೇರಿದಂತಾಗಿದೆ.
ಮುಂಬೈನಲ್ಲಿ ಒಂದೇ ದಿನ 308 ಪ್ರಕರಣಗಳು ವರದಿಯಾಗಿದ್ದು, ಮಹಾನಗರವೊಂದರಲ್ಲೇ ಸೋಂಕಿತರ ಸಂಖ್ಯೆ 3000ದ ಗಡಿ ದಾಟಿದೆ. ಮೊದಲ 1000 ಪ್ರಕರಣಗಳಿಗೆ ಒಂದು ತಿಂಗಳು ಸಮಯ ತಗುಲಿದ್ದರೆ, ಬಳಿಕ ಕೇವಲ ಆರು ದಿನಗಳಲ್ಲಿ ಪ್ರಕರಣ ಸಂಖ್ಯೆ ದುಪ್ಪಟ್ಟಾಗಿದೆ. ಬಳಿಕ ನಾಲ್ಕು ದಿನದಲ್ಲೇ ಮತ್ತೊಂದು ಸಾವಿರ ಪ್ರಕರಣಗಳು ಬೆಳಕಿಗೆ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News