×
Ad

ಪಾಲ್ಗರ್ ನಲ್ಲಿ ಸಾಧುಗಳ ಭಯಾನಕ ಗುಂಪು ಹತ್ಯೆಗೆ ಕೋಮು ಬಣ್ಣ ಹಚ್ಚಲು ಯತ್ನ

Update: 2020-04-22 09:48 IST

ಘಟನೆಯಲ್ಲಿ ಆರೋಪಿಗಳು, ಬಲಿಪಶುಗಳು ಒಂದೇ ಧರ್ಮದವರು ಎಂದ ಪೊಲೀಸರು 

ಮಹಾರಾಷ್ಟ್ರ, ಎ.22: ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಕಾಸ ಪೊಲೀಸ್ ಠಾಣೆ ವ್ಯಾಪ್ತಿಯ ಗಢಚಿಂಚಲೆ ಎಂಬ ಗ್ರಾಮದ ಬಳಿ ಎಪ್ರಿಲ್ 16ರಂದು ಸಶಸ್ತ್ರ ಗುಂಪೊಂದು ಮೂರು ಮಂದಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದು ಹಾಕಿತು. ಮೃತಪಟ್ಟವರಲ್ಲಿ ಇಬ್ಬರು ಸಾಧುಗಳು ಹಾಗು ಮೂರನೇ ವ್ಯಕ್ತಿ ಆ ಸಾಧುಗಳ ಕಾರಿನ ಡ್ರೈವರ್ ನೀಲೇಶ್. ಮೂರು ದಿನಗಳ ಬಳಿಕ ಈ ಭೀಕರ ಹಲ್ಲೆ ಹಾಗು ಕೊಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಆದರೆ ಹೀಗೆ ವೈರಲ್ ಆಗುವಾಗ ಅದರೊಂದಿಗಿದ್ದ ವಿವರಣೆ ಮಾತ್ರ ಇನ್ನಷ್ಟು ಭಯಾನಕವಾಗಿತ್ತು. ಸಾಧುಗಳನ್ನು ಒಂದು ಸಮುದಾಯದ ಮಂದಿ ಹಲ್ಲೆ ನಡೆಸಿ ಕೋಮು ಹಿಂಸಾಚಾರರಲ್ಲಿ ಕೊಂದಿದ್ದಾರೆ ಎಂದು ಆ ವಿಡಿಯೋವನ್ನು ಬಣ್ಣಿಸಲಾಯಿತು. 

ಇದಕ್ಕಾಗಿ "ಮಾರ್ ಶೋಯೆಬ್ ಮಾರ್ (ಅವರಿಗೆ ಹೊಡಿ ಶೋಯೆಬ್, ಹೊಡಿ)" ಎಂದು ಆ ಗುಂಪು ಹೇಳುತ್ತಿತ್ತು ಎಂದು ಆ ಭಯಾನಕ ವಿಡಿಯೋವನ್ನು ಟ್ವೀಟ್ ಮಾಡಿದ ಹಲವರು ಬರೆದರು. ಚಿತ್ರ ನಿರ್ದೇಶಕ ಹಾಗು ಬಿಜೆಪಿ, ಸಂಘ ಪರಿವಾರದ ಕಟ್ಟಾ ಬೆಂಬಲಿಗ ಅಶೋಕ್ ಪಂಡಿತ್ ಕನಿಷ್ಠ ಎರಡು ಬಾರಿ ಆ ಗುಂಪು ಹತ್ಯೆಯಲ್ಲಿ ಭಾಗವಹಿಸಿದ್ದ ಒಬ್ಬನ ಹೆಸರು ಶೋಯೆಬ್ ಎಂದು ಹೇಳಿದರು. ಶೋಯೆಬ್ ಸಾಮಾನ್ಯವಾಗಿ ಮುಸ್ಲಿಮರು ಬಳಸುವ ಹೆಸರು. 

ಸದಾ ಕೋಮು ದ್ವೇಷದ ಸುದ್ದಿಗಳನ್ನೇ ಬಿತ್ತರಿಸುವ ಸುದರ್ಶನ್ ನ್ಯೂಸ್ ಟಿವಿ ವಾಹಿನಿಯ ಸುರೇಶ್ ಚಾವನ್ಕೆ ಅವರೂ ವಿಡಿಯೋದಲ್ಲಿ ನನಗೆ ಶೋಯೆಬ್ ಹೆಸರು ಕೇಳಿಸುತ್ತಿತ್ತು ಎಂದು ಹೇಳಿದರು. 

ಬಿಜೆಪಿ ದಿಲ್ಲಿ ಘಟಕದ ಮಾಧ್ಯಮ ವಿಭಾಗದ ರಿಚಾ ಪಾಂಡೆ ಮಿಶ್ರಾ ಅವರೂ ಈ ವಿಡಿಯೋವನ್ನು ಟ್ವೀಟ್ ಮಾಡಿ "ಅವರಿಗೆ ಹೊಡಿ ಶೋಯೆಬ್, ಹೊಡಿ" ಎಂದು ಬರೆದರು. ಅದೇ ಧಾಟಿಯಲ್ಲಿ ಟ್ವೀಟ್ ಮಾಡಿದ Yana Mir ಹಾಗು This Posable ಟ್ವೀಟ್ ಗಳು ಒಟ್ಟು 2,700 ಬಾರಿ ರಿಟ್ವೀಟ್ ಆದವು. ಅದೇ ರೀತಿಯ ಕೋಮು ಬಣ್ಣ ಹಚ್ಚಿ Our India ಎಂಬ ಫೇಸ್ ಬುಕ್ ಪೇಜ್ ಮಾಡಿದ ಪೋಸ್ಟ್  2,200 ಕ್ಕೂ ಹೆಚ್ಚು ಶೇರ್ ಆಗಿದೆ.  


ಮೃತ ಸಾಧುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ "ಕ್ರಿಸ್ಟಿಯನ್ ಮಿಷನರಿಗಳ ಗೂಂಡಾಗಳು ಮಾಡಿದ ಕೃತ್ಯ" ಎಂಬ ವಿವರಣೆಯನ್ನೂ ನೀಡಲಾಯಿತು.  

ಶೋಯೆಬ್ ಇಲ್ಲ 
ಈ ಘಟನೆಗೆ ಸಂಬಂಧಿಸಿದ ಹಲವು ಕೋನಗಳಿಂದ ತೆಗೆದ ಹಲವು ವಿಡಿಯೋಗಳನ್ನು Alt News ಕೇಳಿದೆ. ಆದರೆ ಅದರಲ್ಲಿ "ಬಸ್ ಒಯೆ ಬಸ್" ಅಂದರೆ ''ಸಾಕು, ಸಾಕು'' ಎಂದು ಹೇಳುವುದು ಮಾತ್ರ ಕೇಳಿದೆ. ಈ ಕೆಳಗಿನ ವಿಡಿಯೋದಲ್ಲೂ ಅದೇ ಕೇಳುತ್ತದೆ. ಹಾಗಾಗಿ ಆ ಘಟನೆಯಲ್ಲಿದ್ದ ಒಬ್ಬ ಆರೋಪಿ ಶೋಯೆಬ್ ಎಂಬ ಆರೋಪ ಸುಳ್ಳು ಎಂದು ಖಚಿತವಾಗುತ್ತದೆ.  

ಕೋಮು ದ್ವೇಷದ ಘಟನೆ ಅಲ್ಲ 

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರೂ ಟ್ವೀಟ್ ಮಾಡಿ ಪಾಲ್ಗರ್ ಘಟನೆ ಕೋಮು ದ್ವೇಷದ ಘಟನೆ ಅಲ್ಲ. ಅಲ್ಲಿ ಮೃತಪಟ್ಟವರು ಮತ್ತು ಕೊಲೆ ಆರೋಪಿಗಳು ಬೇರೆ ಬೇರೆ ಧರ್ಮದವರಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಈ ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಸ್ಪಷ್ಟೀಕರಣ ನೀಡಿ ಅಲ್ಲಿ ಕಳ್ಳರು ತಿರುಗುತ್ತಿದ್ದಾರೆ ಎಂಬ ವದಂತಿ ಹೆಚ್ಚಾಗಿದ್ದರಿಂದ ಘಟನೆ ನಡೆದಿದೆ. ಆದರೆ ಅದರಲ್ಲಿ ಯಾವುದೇ ಕೋಮು ಹಿಂಸೆ ನಡೆದಿಲ್ಲ ಎಂದು ಹೇಳಿದರು. 

ಗಢಚಿಂಚಲೆ  ಗ್ರಾಮದಲ್ಲಿ ರಾತ್ರಿ ಪಾಳಿಯಲ್ಲಿ ಕಾವಲು ಕಾಯಲು ಊರಿನ ಜನರೇ ನೇಮಿಸಿದ್ದ ಸ್ಥಳೀಯ ಬುಡಕಟ್ಟು ಜನರು ಎಪ್ರಿಲ್ 16ರಂದು  ಕಾರೊಂದನ್ನು ತಡೆದು ನಿಲ್ಲಿಸಿದ್ದರು. ಅದರಲ್ಲಿ ಮೂರು ಮಂದಿಯಿದ್ದರು. ಇಬ್ಬರು ಸಾಧುಗಳು ಹಾಗು ಒಬ್ಬರು ಅವರ ಡ್ರೈವರ್. ಅವರು ಮುಂಬೈಯ ಕಾಂದಿವಲಿಯಿಂದ ಸಿಲ್ವಾಸಾಗೆ ಅಂತಿಮ ಸಂಸ್ಕಾರವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದವರು. ಆ ಮೂವರನ್ನು ತಡೆದ ಗುಂಪು ಮೊದಲು ಅವರನ್ನು ಪ್ರಶ್ನಿಸಿತು, ಬಳಿಕ ಅವರ ಮೇಲೆ ಕಲ್ಲು ತೂರಾಟ ನಡೆಸಿತು ಮತ್ತು ಕೊನೆಗೆ ಅವರ ಮೇಲೆ ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿತು. ಘಟನೆಗೆ ಸಂಬಂಧಿಸಿ ಪೊಲೀಸರು ನೂರಕ್ಕೂ ಹೆಚ್ಚು ಮಂದಿಯನ್ನು ಹಾಗು ಒಂಬತ್ತು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.  

ಈ ಬಗ್ಗೆ  Alt News ಪಾಲ್ಗರ್ ಪೊಲೀಸರನ್ನು ಸಂಪರ್ಕಿಸಿದಾಗ ಅವರೂ ಈ ಘಟನೆಯಲ್ಲಿ ಯಾವುದೇ ಕೋಮು ಹಿಂಸೆ ನಡೆದಿಲ್ಲ. ಅಲ್ಲಿ ಆರೋಪಿಗಳು ಹಾಗು ಬಲಿಪಶುಗಳು ಒಂದೇ ಧರ್ಮದವರು ಎಂದು ಹೇಳಿದ್ದಾರೆ. ಊರಿನಲ್ಲಿ ವಲಸಿಗರು ಬಂದು ಕಳ್ಳತನ ನಡೆಸುತ್ತಾರೆ ಎಂಬ ವದಂತಿ ಜೋರಾಗಿತ್ತು. ಈ ವದಂತಿಕೋರರನ್ನು ಈಗ ಹುಡುಕಲಾಗುತ್ತಿದೆ ಎಂದು ಪಾಲ್ಗರ್ ಎಸ್ಪಿ ಗೌರವ್ ಸಿಂಗ್ 'ಇಂಡಿಯನ್ ಎಕ್ಸ್ ಪ್ರೆಸ್'ಗೆ ಹೇಳಿದ್ದಾರೆ. 

ಈ ಗುಂಪು ಹತ್ಯೆ ನಡೆಯುವ ಕೆಲವೇ ದಿನಗಳ ಮೊದಲು ಸಾರಣಿ ಎಂಬ ಗ್ರಾಮದಲ್ಲಿ ಡಾ.ವಿಶ್ವಾಸ್ ವಲವಿ ಎಂಬವರು ಆಹಾರ ಪೊಟ್ಟಣಗಳನ್ನು ವಿತರಿಸಿ ಸ್ಥಳೀಯ ಬುಡಕಟ್ಟು ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ ಮರಳುವಾಗ ಅವರ ಮೇಲೆ ದಾಳಿ ನಡೆದಿತ್ತು. ಆ ಘಟನೆಯಲ್ಲಿ ನಾಲ್ವರು ಪೊಲೀಸರೂ ಗಾಯಗೊಂಡಿದ್ದರು. 

ಪಾಲ್ಗರ್ ಗುಂಪು ಹತ್ಯೆಗೆ ಕೋಮು ಬಣ್ಣ ಹಚ್ಚಲು ವಿಫಲ ಯತ್ನ ನಡೆಸಿದ ಬಲಪಂಥೀಯ ಟ್ರೋಲ್ ಗಳು ಹಾಗು ಕೆಲವು ಪ್ರಮುಖ ವ್ಯಕ್ತಿಗಳು ಘಟನೆಯಲ್ಲಿ ಯಾವುದೇ ಕೋಮು ವಿಷಯವೇ ಇಲ್ಲ ಎಂದು ಸ್ಪಷ್ಟವಾದ ಮೇಲೆ ಮೌನವಾಗಿದ್ದಾರೆ. ಇವರು ಯಾರೂ ತಮ್ಮ ಸುಳ್ಳು ಟ್ವೀಟ್ ಗಳಿಗಾಗಿ ಕ್ಷಮೆ ಯಾಚಿಸಿದ ವರದಿ ಈವರೆಗೆ ಬಂದಿಲ್ಲ.   

ಮಾಹಿತಿ : ಜಿಗ್ನೇಶ್ ಪಟೇಲ್,  Alt News.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News