×
Ad

ಅಮಿತ್ ಶಾ ಭೇಟಿ: ಗುರುವಾರ ನಡೆಸಲುದ್ದೇಶಿಸಿದ್ದ ‘ಬ್ಲ್ಯಾಕ್ ಡೇ’ ಪ್ರತಿಭಟನೆ ಹಿಂಪಡೆದ ವೈದ್ಯಕೀಯ ಸಂಘ

Update: 2020-04-22 13:59 IST

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಪೂರ್ಣ ಸುರಕ್ಷತೆಯ ಭರವಸೆಯನ್ನು ನೀಡಿದ ನಂತರ ಗುರುವಾರ ನಡೆಸಲು ಉದ್ದೇಶಿಸಲಾಗಿದ್ದ ‘ಬ್ಲ್ಯಾಕ್ ಡೇ’ ಆಚರಣೆಯನ್ನು ಆಚರಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹಿಂದೆಗೆದುಕೊಂಡಿದೆ.

ಚೆನ್ನೈನಲ್ಲಿ ಕೋವಿಡ್-19 ಸೋಂಕಿಗೊಳಗಾಗಿ ಮೃತಪಟ್ಟ ವೈದ್ಯರೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಹಾಗೂ ಅವರ ಮೃತದೇಹವಿದ್ದ ಆ್ಯಂಬುಲೆನ್ಸ್ ಗೆ ಕಲ್ಲೆಸೆದ ಘಟನೆಯನ್ನು ಖಂಡಿಸಿ ಗುರುವಾರ  ಕಪ್ಪು ದಿನವನ್ನಾಗಿ ಆಚರಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹಾಗೂ ಇತರ ವೈದ್ಯರ ಸಂಘಟನೆಗಳು ನಿರ್ಧರಿಸಿದ್ದವು.

ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಗುರುವಾರ ಕಪ್ಪು ಬ್ಯಾಡ್ಜ್ ಧರಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿತ್ತು.

“ಸರಕಾರ ತಕ್ಷಣ ಕಠಿಣ ಕಾನೂನು ಜಾರಿಗೆ  ತಂದಲ್ಲಿ ಮಾತ್ರ ಸರಕಾರ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂಬ ಬಲವಾದ ಸಂದೇಶ ಮೂಡಿಸಿದಂತಾಗುತ್ತದೆ'' ಎಂದು  ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಆಧ್ಯಕ್ಷ ಪಿ ರಘುರಾಮ್ ಹೇಳಿದ್ದಾರೆ.

``ಕೋವಿಡ್-19  ಸಮಸ್ಯೆಯ ಜತೆಗೆ  ಈ ಸಮಸ್ಯೆ ವಿರುದ್ಧ ಹೋರಾಡುತ್ತಿರುವ ಹಾಗೂ ತಮ್ಮ ಜೀವದ ಹಂಗು ತೊರೆದು ರೋಗಿಗಳನ್ನು ಆರೈಕೆ ಮಾಡುತ್ತಿರುವವರ ಮೇಲೆ ನಡೆಯುತ್ತಿರುವ ದೈಹಿಕ ಹಲ್ಲೆ ಹಾಗೂ  ಅವರು ಕೇಳಬೇಕಾದ ನಿಂದನೆಗಳು  ನಮ್ಮ  ಅಸಹಾಯಕತೆಯನ್ನು ಪ್ರದರ್ಶಿಸಿದೆ. ಇಂತಹ ಘಟನೆಗಳನ್ನು ತಡೆಯಲು ಕೇಂದ್ರದಿಂದ ವಿಶೇಷ ಕಾಯಿದೆಯ ಬೇಡಿಕೆ ಇಡುತ್ತಿದ್ದೇವೆ'' ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಡಾ ಸಂಜೀವ್ ಸಿಂಗ್ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News