ನಾಗರಿಕ ವಿಮಾನಯಾನ ಸಚಿವಾಲಯದ ಉದ್ಯೋಗಿಗೆ ಕೊರೋನ ಸೋಂಕು: ಕಚೇರಿಗೆ ಸೀಲ್
ಹೊಸದಿಲ್ಲಿ: ಎಪ್ರಿಲ್ 15ರಂದು ಕೇಂದ್ರ ಸರಕಾರ ತನ್ನ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿ ಕಾರ್ಯಗಳನ್ನು ಲಾಕ್ ಡೌನ್ ನಡುವೆ ಮರು ಆರಂಭಿಸಿದಾಗ ಕರ್ತವ್ಯಕ್ಕೆ ಹಾಜರಾಗಿದ್ದ ಉದ್ಯೋಗಿಯೊಬ್ಬರಿಗೆ ಕೊರೋನವೈರಸ್ ಇರುವುದು ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ವಿಮಾನಯಾನ ಸಚಿವಾಲಯದ ಕಚೇರಿಯಿರುವ ರಾಜೀವ್ ಗಾಂಧಿ ಭವನ್ ಅನ್ನು ಈಗ ಸೀಲ್ ಮಾಡಲಾಗಿದ್ದು ಕೊರೋನ ಪಾಸಿಟಿವ್ ಆಗಿರುವ ಉದ್ಯೋಗಿಯ ಸಂಪರ್ಕಕ್ಕೆ ಬಂದಿದ್ದ ಎಲ್ಲಾ ಉದ್ಯೋಗಿಗಳಿಗೆ ಗೃಹ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ. ಎಲ್ಲರನ್ನೂ ಕೊರೋನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಲು ಹೊಸದಿಲ್ಲಿ ಮುನಿಸಿಪಲ್ ಕೌನ್ಸಿಲ್‍ಗೆ ಹೇಳಲಾಗಿದೆ.
ಉದ್ಯೋಗಿ ಕೊರೋನ ಪಾಸಿಟಿವ್ ಎಂದು ಎಪ್ರಿಲ್ 21ರಂದು ತಿಳಿದು ಬಂದಿತ್ತು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಒಂದರಲ್ಲಿ ಹೇಳಿದೆ. ಕೊರೋನ ಸೋಂಕಿತ ಉದ್ಯೋಗಿಗೆ ಎಲ್ಲಾ ಸಾಧ್ಯ ಸಹಾಯ ನೀಡಲಾಗುವುದು ಹಾಗೂ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.