ಕೊರೋನ ಕುರಿತ ರಾಹುಲ್ ಹೇಳಿಕೆ ತಿರುಚಿದ ಆರೋಪ: ಅರ್ನಬ್ ಗೋಸ್ವಾಮಿ ವಿರುದ್ಧ ಹಲವು ದೂರು ದಾಖಲು

Update: 2020-04-22 11:11 GMT

ಹೊಸದಿಲ್ಲಿ: ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ತಿರುಚಿದ್ದಾರೆಂದು ಆರೋಪಿಸಿ ಛತ್ತೀಸಗಢದಲ್ಲಿ ಹಲವು ದೂರುಗಳು ದಾಖಲಾಗಿವೆ.

ಛತ್ತೀಸಗಢದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ 12 ಜಿಲ್ಲೆಗಳಲ್ಲಿ ಹಾಗೂ ರಾಯಪುರ್ ಸಹಿತ ಇತರೆಡೆ  ದೂರುಗಳನ್ನು ದಾಖಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ತಮ್ಮ ತಿರುಚಿದ ಹೇಳಿಕೆಗಳಿಗೆ ಅರ್ನಬ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ದೂರಿನಲ್ಲಿ ಆಗ್ರಹಿಸಲಾಗಿದೆ.

``ರಾಹುಲ್ ಗಾಂಧಿ ಎಪ್ರಿಲ್ 16ರಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೋರೋನ ವಿರುದ್ಧದ ಹೋರಾಟಕ್ಕೆ ಲಾಕ್ ಡೌನ್ ಮಾತ್ರ ಪರಿಹಾರವಲ್ಲ ಬದಲಾಗಿ ಅದನ್ನು ನಿಲ್ಲಿಸುವ ಬಟನ್ ಆಗಿದೆ ಎಂದು ಹೇಳಿದ್ದರಲ್ಲದೆ, ಕೊರೋನ ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಬೇಕೆಂದೂ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ ಮೋದಿ ಸರಕಾರದ ಕೊರೋನ ವಿರುದ್ಧದ ಹೋರಾಟಕ್ಕೆ ಬೆಂಬಲ ಕೂಡ ಘೋಷಿಸಿದ್ದರು. ಆದರೆ ಅರ್ನಬ್ ತಮ್ಮ ಪ್ರೈಮ್ ಟೈಮ್ ಶೋನಲ್ಲಿ ರಾಹುಲ್ ಹೇಳಿಕೆಯನ್ನು ತಿರುಚಿದ್ದಾರೆ, ಅರ್ನಬ್  ಹಾಗೂ  ಅವರಂತಹ ಸುದ್ದಿ ವಾಹಿನಿ ನಿರೂಪಕರು ಬಿತ್ತರಿಸುವ ಕಾರ್ಯಕ್ರಮಗಳಿಂದಾಗಿಯೇ ಪ್ರತಿ ದಿನ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಮೇಲೆ ದೇಶದಲ್ಲಿ ಹಲ್ಲೆಗಳು ನಡೆಯುತ್ತಿವೆ'' ಎಂದು ಛತ್ತೀಸಗಢ ಕಾಂಗ್ರೆಸ್ಸಿನ ಮಾಧ್ಯಮ ಘಟಕದ ಮುಖ್ಯಸ್ಥ ಶೈಲೇಶ್ ನಿತಿನ್ ತ್ರಿವೇದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News