×
Ad

ಹಸಿವಿನ ಆತಂಕದ ನಡುವೆ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿ: ಕೇಂದ್ರದ ನಿರ್ಧಾರಕ್ಕೆ ಸಾಮಾಜಿಕ ಹೋರಾಟಗಾರರ ವಿರೋಧ

Update: 2020-04-22 20:46 IST

ಹೊಸದಿಲ್ಲಿ, ಎ.22: ಕೊರೋನ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿರುವ ಹೆಚ್ಚುವರಿ ಅಕ್ಕಿಯನ್ನು ಹ್ಯಾಂಡ್ ಸ್ಯಾನಿಟೈಸರ್‌ಗಳಿಗೆ ಅಗತ್ಯವಾಗಿರುವ ಎಥೆನಾಲ್ ತಯಾರಿಕೆಗೆ ಬಳಸುವ ಕೇಂದ್ರದ ನಿರ್ಧಾರವನ್ನು ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವ ‘ರೈಟ್ ಟು ಫುಡ್ ಕ್ಯಾಂಪೇನ್ (ಆರ್‌ಟಿಎಫ್‌ಸಿ)’ ಕಟುವಾಗಿ ಟೀಕಿಸಿದೆ.

ಯಾವುದೇ ವ್ಯಕ್ತಿಯು ಹಸಿವಿನಿಂದ ನರಳದಂತಾಗಲು ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯನ್ನು ಸಾರ್ವತ್ರಿಕಗೊಳಿಸುವಂತೆ ನಾಗರಿಕ ಸಮಾಜ ಮತ್ತು ಚಿಂತಕರು ಮಾಡಿಕೊಂಡಿರುವ ಹಲವಾರು ಬೇಡಿಕೆಗಳಿಗೆ ಸ್ಪಂದಿಸದ ಸರಕಾರವು ಹೆಚ್ಚುವರಿ ಅಕ್ಕಿಯಿಂದ ಎಥೆನಾಲ್ ತಯಾರಿಕೆಗೆ ನಿರ್ಧರಿಸಿರುವುದು ಆಘಾತ ಮತ್ತು ನಿರಾಶೆಯನ್ನುಂಟು ಮಾಡಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಆರ್‌ಟಿಎಫ್‌ಸಿ, ಕೇಂದ್ರವು ಭಾರತದ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕನ್ನು ಖಾತರಿಪಡಿಸಿರುವ ಸಂವಿಧಾನದ 21ನೇ ವಿಧಿಯನ್ನು ಎತ್ತಿಹಿಡಿಯಬೇಕು. ಎಲ್ಲ ಬೆಳೆಗಳ ವಿಕೇಂದ್ರೀಕೃತ ಖರೀದಿಗೆ ಮುಂದಾಗುವ ಮತ್ತು ಎಲ್ಲರಿಗೂ ಆಹಾರ ಪೂರೈಕೆಗೆ ವ್ಯವಸ್ಥೆಗಳನ್ನು ಜಾರಿಗೆ ತರುವ ಬದಲು ಸರಕಾರವು ಅದನ್ನು ಸ್ಯಾನಿಟೈಸರ್ ಉತ್ಪಾದನೆಗೆ ಬಳಸಲು ಯೋಚಿಸಿರುವುದು ಶೋಚನೀಯ ವಾಗಿದೆ. ಎಲ್ಲರಿಗೂ ಕೈಗಳನ್ನು ತೊಳೆದುಕೊಳ್ಳಲು ಸಾಕಷ್ಟು ವ್ಯವಸ್ಥೆ ಇರಬೇಕು ಎನ್ನುವುದು ಮುಖ್ಯವಾಗಿದೆ ನಿಜ. ಇದಕ್ಕಾಗಿ ಸರಕಾರವು ಸಾಕಷ್ಟು ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಮತ್ತು ಪಿಡಿಎಸ್ ಮೂಲಕ ಸಾಬೂನುಗಳನ್ನು ವಿತರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದಿದೆ.

ಕೋಟ್ಯಂತರ ಜನರು ತಮ್ಮ ಜೀವನೋಪಾಯಗಳನ್ನು ಕಳೆದುಕೊಳ್ಳುವುದರೊಂದಿಗೆ ಮತ್ತು ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿ ಆಹಾರ ಮತ್ತು ವಸತಿಯಿಲ್ಲದೆ ಅತಂತ್ರರಾಗುವುದರೊಂದಿಗೆ ಲಾಕ್‌ಡೌನ್ ಸಾಮೂಹಿಕ ಯಾತನೆಗೆ ಕಾರಣವಾಗಿದೆ. ಪಿಡಿಎಸ್ ಮೂಲಕ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಪ್ರಕಟಿಸಲು ಸರಕಾರವು ಮೂರು ದಿನಗಳ ಸಮಯವನ್ನು ತೆಗೆದುಕೊಂಡಿದ್ದು,ಇದೂ ಪಡಿತರ ಚೀಟಿಗಳನ್ನು ಹೊಂದಿದವರಿಗಷ್ಟೇ ಸೀಮಿತವಾಗಿದೆ. ಕಳೆದ ಮೂರು ವಾರಗಳಿಂದ ದೇಶಾದ್ಯಂತ ಸಾಮೂಹಿಕ ಹಸಿವು ಮತ್ತು ಜನರು ಹಸಿವೆಯ ಸಂಕಟಕ್ಕೆ ಸಿಲುಕುತ್ತಿರುವ ವರದಿಗಳು ಬರುತ್ತಿವೆ. ಹೆಚ್ಚುವರಿ ಆಹಾರ ಧಾನ್ಯಗಳು ಈಗಲೂ ಹೆಚ್ಚಿನ ಸ್ಥಳಗಳಿಗೆ ತಲುಪಿಲ್ಲ ಎಂದಿರುವ ಆರ್‌ಟಿಎಫ್‌ಸಿ, ಪರಿಹಾರ ಕ್ರಮಗಳ ಲಾಭ ಪಡೆಯಲು ಸುಮಾರು 80 ಕೋಟಿ ಜನರ ಬಳಿ ಪಡಿತರ ಚೀಟಿಗಳಿಲ್ಲವಾದ್ದರಿಂದ ಪಡಿತರ ಪೂರೈಕೆಯನ್ನು ಸಾರ್ವತ್ರಿಕಗೊಳಿಸಬೇಕು ಎಂದು ಆಗ್ರಹಿಸಿದೆ.

  ದೇಶದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿವೆ ಎಂದಿರುವ ಅದು,ಲಾಕ್‌ಡೌನ್ ಹೊರತಾಗಿಯೂ ದೇಶದಲ್ಲಿ ಆಹಾರದ ಕೊರತೆಯಿಲ್ಲ ಎಂದು ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ಪಿಡಿಎಸ್ ಸಚಿವ ರಾಮವಿಲಾಸ ಪಾಸ್ವಾನ್ ಅವರೂ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News