ಕೋವಿಡ್-19 ಆರಂಭಗೊಂಡದ್ದು ವೈರಸ್‌ನಿಂದ, ಹರಡುತ್ತಿರುವುದು ಸರಕಾರ: ರಾಜೀವ್ ಬಜಾಜ್

Update: 2020-04-22 16:15 GMT

ಹೊಸದಿಲ್ಲಿ, ಎ.22: ಕೊರೋನ ವೈರಸ್ ಸೋಂಕು ಹರಡುವಿಕೆ ಯನ್ನು ತಡೆಯಲು ‘ನಿರಂಕುಶ ಲಾಕ್‌ಡೌನ್’ ಹೇರಿದ್ದಕ್ಕಾಗಿ ಬಜಾಜ್ ಆಟೋದ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ಅವರು ನರೇಂದ್ರ ಮೋದಿ ಸರಕಾರವನ್ನು ತೀವ್ರ ತರಾಟೆಗೆತ್ತಿ ಕೊಂಡಿದ್ದಾರೆ.

“ಬಿಕ್ಕಟ್ಟು ಒಂದು ವೈರಸ್‌ನಿಂದ ಆರಂಭಗೊಂಡಿತ್ತು, ಆದರೆ ಸರಕಾರವು ಅದನ್ನು ಹರಡುತ್ತಿದೆ. ಲಾಕ್‌ಡೌನ್ ಆರೋಗ್ಯ ಬಿಕ್ಕಟ್ಟಿಗೆ ದೀರ್ಘಾವಧಿಯ ಉತ್ತರವಲ್ಲ. ಯುವಜನರು ಮತ್ತು ಆರೋಗ್ಯವಂತರು ಕೆಲಸಕ್ಕೆ ಮರಳುವುದು ಅಗತ್ಯವಾಗಿದೆ. ಲಾಕ್‌ಡೌನ್ ನಿರಂಕುಶವಾಗಿದೆ ಮತ್ತು ಅದು ಆರ್ಥಿಕ ಬಿಕ್ಕಟ್ಟಿಗೆ ಉತ್ತರವೂ ಅಲ್ಲ” ಎಂದು ಅವರು ಹೇಳಿದರು.

ಸರಕಾರವು ದೇಶದ ಆರ್ಥಿಕ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದೆ ಮತ್ತು ಪ್ರಜೆಗಳ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸುವ ಮೂಲಕ ಅವರ ಸಂಕಟವನ್ನು ಶಾಶ್ವತಗೊಳಿಸುತ್ತಿದೆ ಎಂದು ಆರೋಪಿಸಿದ ಬಜಾಜ್,ಲಾಕ್‌ಡೌನ್ ಸಮಸ್ಯೆಗೆ ಪರಿಹಾರವಲ್ಲ. ದೇಶದ ಪ್ರಜೆಗಳ ಸರಾಸರಿ ವಯೋಮಾನ 28 ವರ್ಷಗಳಾಗಿದ್ದು, ಇಲ್ಲಿ ಸಾಮಾಜಿಕ ಭದ್ರತೆಯೂ ಇಲ್ಲ. ಆರ್ಥಿಕ ಮತ್ತು ವಾಣಿಜ್ಯಿಕ ಬಿಕ್ಕಟ್ಟಿಗೆ ಲಾಕ್‌ಡೌನ್ ಪರಿಹಾರವಲ್ಲ ಎಂದರು.

ಆರ್ಥಿಕತೆಯ ಚೇತರಿಕೆಗೆ ನೆರವಾಗಲು 60 ವರ್ಷ ಮೀರಿದವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ತಮ್ಮ ಕೆಲಸಗಳಿಗೆ ಮರಳಲು ಅಧಿಕಾರಿಗಳು ಅವಕಾಶ ನೀಡಬೇಕು ಎಂದರು.

ಲಾಕ್‌ಡೌನ್‌ನಿಂದಾಗಿ ಉದ್ಯೋಗ ನಷ್ಟಗಳನ್ನು ಬೆಟ್ಟು ಮಾಡಿದ ಅವರು,ತನ್ನ ದ್ವಿಚಕ್ರ ವಾಹನ ತಯಾರಿಕೆ ಕಾರ್ಖಾನೆ ಸಂಪೂರ್ಣ ಸ್ತಬ್ಧಗೊಂಡಿದೆ. ನೀವು ಪೂರೈಕೆದಾರರು ಮತ್ತು ವಿತರಕರೊಂದಿಗೆ ಮಾತನಾಡಿದರೆ ನಿಜ ಸ್ಥಿತಿ ಗೊತ್ತಾಗುತ್ತದೆ. ಯಾವುದೇ ಉದ್ಯೋಗ ನಷ್ಟವಾಗಿಲ್ಲ ಮತ್ತು ವೇತನ ಕಡಿತವಾಗಿಲ್ಲ ಎಂಬಂತೆ ಸರಕಾರವು ನಟಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News