ಕೊರೋನ ಚಿಕಿತ್ಸೆಗೆ ಔಷಧ ಸಂಶೋಧಿಸಿ: ವಿಜ್ಞಾನಿಗಳಿಗೆ ಆಯುಷ್ ಇಲಾಖೆ ಆಹ್ವಾನ
ಹೊಸದಿಲ್ಲಿ, ಎ.22: ವಿಶ್ವದಾದ್ಯಂತ 24 ಲಕ್ಷಕ್ಕೂ ಅಧಿಕ ಜನರ ಮೇಲೆ ಪರಿಣಾಮ ಬೀರಿರುವ ಕೊರೋನ ಸೋಂಕಿಗೆ ಔಷಧ ಕಂಡು ಹುಡುಕುವಂತೆ ಆಯುಷ್ ಸಚಿವಾಲಯ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಆಹ್ವಾನ ನೀಡಿದೆ.
ಕೊರೋನ ಸೋಂಕಿಗೆ ಇದುವರೆಗೆ ಔಷಧ ಕಂಡುಹಿಡಿದಿಲ್ಲವಾದರೂ, ಸಂಭವನೀಯ ಚಿಕಿತ್ಸೆಯ 20,000ಕ್ಕೂ ಅಧಿಕ ಪ್ರಸ್ತಾಪವನ್ನು ಫೋನ್, ಇ-ಮೇಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ ಸಂಶೋಧನೆ ನಡೆಸುವ ಮುನ್ನ ಸಂಸ್ಥೆಗಳು ತಮ್ಮ ಪ್ರಸ್ತಾವಕ್ಕೆ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ಸಾಂಸ್ಥಿಕ ನೈತಿಕ ಸಮಿತಿಯ ಅನುಮೋದನೆ ಪಡೆದಿರಬೇಕು . ವೈದ್ಯಕೀಯ ಪ್ರಯೋಗದ ಪ್ರಕರಣವಾದರೆ , ಈ ಯೋಜನೆಯನ್ನು ‘ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಆಫ್ ಇಂಡಿಯಾ’ದಲ್ಲಿ ನೋಂದಾಯಿಸಿರಬೇಕು ಎಂದು ಇಲಾಖೆ ತಿಳಿಸಿದೆ.
ವೈದ್ಯಕೀಯ ಪ್ರಯೋಗವನ್ನು ಆಯುಷ್ ಮಾರ್ಗದರ್ಶಿ ಸೂತ್ರ ಅಥವಾ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಮಾರ್ಗದರ್ಶಿ ಸೂತ್ರದಂತೆ ಮಾತ್ರ ನಡೆಸಬೇಕು ಎಂದೂ ಇಲಾಖೆಯ ಅಧಿಸೂಚನೆ ತಿಳಿಸಿದೆ.
ಕೊರೋನ ಸೋಂಕು ಸಮಸ್ಯೆ ನಿಭಾಯಿಸಲು ಆಯುಷ್(ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಸೊವಾರಿಗ್ಪ ಮತ್ತು ನ್ಯಾಚುರೋಪಥಿ) ವೈದ್ಯಕೀಯ ವೃತ್ತಿ ನಡೆಸುವವರು ಕಾರ್ಯ ಪ್ರವೃತ್ತರಾಗಬೇಕು ಎಂದು ಪ್ರಧಾನಿ ಮೋದಿ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ‘ರೋಗ ನಿರೋಧಕ ಕ್ರಮಗಳು, ಕ್ವಾರಂಟೈನ್ ಸಮಯದಲ್ಲಿ ಆವಿಷ್ಕಾರ, ಕೋವಿಡ್-19ರ ಲಕ್ಷಣರಹಿತ ಮತ್ತು ರೋಗಲಕ್ಷಣದ ಪ್ರಕರಣಗಳು, ಸಾರ್ವಜನಿಕ ಆರೋಗ್ಯ ಸಂಶೋಧನೆ, ಸಮೀಕ್ಷೆ, ಪ್ರಯೋಗಾಲಯ ಆಧಾರಿತ ಸಂಶೋಧನೆ ’ ನಡೆಸುವಂತೆ ತಿಳಿಸಲಾಗಿದೆ.
ಕೊರೋನ ವೈರಸ್ ಹೊಸ ಸೋಂಕು ರೋಗವಾಗಿರುವ ಹಿನ್ನೆಲೆಯಲ್ಲಿ ಇದರ ಚಿಕಿತ್ಸೆಯಲ್ಲಿ ಆಯುರ್ವೇದಿಕ್ ಔಷಧದ ಪರಿಣಾಮಕಾರಿತ್ವ ಇನ್ನೂ ನಿರ್ಧರಿತವಾಗಿಲ್ಲ. ಆದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕ್ರಮವಾಗಿ ಆಯುರ್ವೇದ ಮೂಲದ ಔಷಧದ ಬಳಕೆಯನ್ನು ಕೇಂದ್ರ ಸರಕಾರ ಪ್ರೋತ್ಸಾಹಿಸುತ್ತದೆ. ಅಲ್ಲದೆ ದೇಶದಾದ್ಯಂತ ವಿವಿಧ ಫ್ಲೂರೋಗಗಳಿಗೆ ಕೆಲವು ಆಯುರ್ವೇದ ಔಷಧ ಜನಪ್ರಿಯವಾಗಿದೆ.
ಮಾರ್ಚ್ 28ರಂದು ಆಯುಷ್ ವೈದ್ಯಕೀಯ ವೃತ್ತಿ ನಡೆಸುತ್ತಿರುವವರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ್ದ ಪ್ರಧಾನಿ ಮೋದಿ, ಆಯುಷ್ ಇಲಾಖೆಯ ಪ್ರಯತ್ನಗಳನ್ನು ಶ್ಲಾಘಿಸಿದ್ದರು ಹಾಗೂ ಸ್ಯಾನಿಟೈಸರ್ ಗಳಂತಹ ಅಗತ್ಯ ವಸ್ತುಗಳನ್ನು ಉತ್ಪಾದಿಸಲು ಆಯುಷ್ ಔಷಧ ಉತ್ಪಾದಕರು ಮುಂದೆ ಬರಬೇಕು ಎಂದು ಕರೆ ನೀಡಿದ್ದರು.