ವಿಮಾನದ ಮೂಲಕ ವೈದ್ಯಕೀಯ ಕಾರಣದ ಪ್ರಯಾಣಕ್ಕೆ ಎಪ್ರಿಲ್ 20ರಿಂದ ಅವಕಾಶ

Update: 2020-04-23 18:15 GMT

ಹೊಸದಿಲ್ಲಿ, ಎ.23: ರೋಗಿಯೊಂದಿಗೆ ಇಬ್ಬರು ಪರಿಚಾರಕರು ಮಾತ್ರ ಇರಬೇಕು ಮತ್ತು ರಾಜ್ಯ ಸರಕಾರದ ಆಕ್ಷೇಪವಿರಬಾರದು ಎಂಬ ಷರತ್ತಿನೊಂದಿಗೆ ವೈದ್ಯಕೀಯ ಸ್ಥಳಾಂತರ ವಿಮಾನಗಳಿಗೆ ಎಪ್ರಿಲ್ 20ರಿಂದ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

ಪತ್ನಿಯನ್ನು ಕ್ಯಾನ್ಸರ್ ಚಿಕಿತ್ಸೆಗೆ ಚೆನ್ನೈಗೆ ಕರೆದೊಯ್ಯಲು ಅನುಮತಿ ನೀಡಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ಸಂದರ್ಭ ನಾಗರಿಕ ವಿಮಾನಯಾನ ಸಚಿವಾಲಯ ಈ ಉತ್ತರ ನೀಡಿದೆ. ಅಲ್ಲದೆ ಚಿಕಿತ್ಸೆಯ ವೆಚ್ಚವನ್ನು ದಿಲ್ಲಿ ಸರಕಾರ ಆರೋಗ್ಯ ಯೋಜನೆ(ಡಿಜಿಎಚ್‌ಎಸ್)ಯಿಂದ ಮರುಪಾವತಿ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಮರುಪಾವತಿಯ ಬಗ್ಗೆ ನ್ಯಾಯಾಲಯಕ್ಕೆ ಉತ್ತರಿಸಿದ ದಿಲ್ಲಿ ಸರಕಾರದ ಹೆಚ್ಚುವರಿ ಸ್ಥಾಯಿ ವಕೀಲ ಗೌತಮ್ ನಾರಾಯಣ್, ಚೆನ್ನೈಯ ಅಪೋಲೋ ಪ್ರಾಟನ್ ಕ್ಯಾನ್ಸರ್ ಕೇಂದ್ರವು ಡಿಜಿಎಚ್‌ಎಸ್ ಯೋಜನೆಯ ಪಟ್ಟಿಯಲ್ಲಿ ಇಲ್ಲದ ಕಾರಣ, ವೆಚ್ಚ ಮರುಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದರು. ರೋಗಿಯನ್ನು ಏರ್ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾದ ವಿಮಾನ ಅಥವಾ ಹೆಲಿಕಾಪ್ಟರ್) ಮೂಲಕ ಚೆನ್ನೈಗೆ ಸಾಗಿಸಲು ದಿಲ್ಲಿ ಸರಕಾರ ನಿರಾಪೇಕ್ಷಣಾ ಪತ್ರ ನೀಡಲಿದೆ ಎಂದವರು ಹೇಳಿದರು.

ಶುಕ್ರವಾರದ ಒಳಗೆ ನಿರಾಪೇಕ್ಷಣಾ ಪತ್ರ ನೀಡುವಂತೆ ದಿಲ್ಲಿ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್, ವೆಚ್ಚ ಮರುಪಾವತಿಗೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿದೆ. ಜೊತೆಗೆ, ಅಪೋಲೋ ಆಸ್ಪತ್ರೆ ಕೇಂದ್ರ ಸರಕಾರದ ಯಾವುದಾದರೂ ಆರೋಗ್ಯ ಯೋಜನೆಯ ವ್ಯಾಪ್ತಿಯಡಿ ಬರುತ್ತದೆಯೇ ಎಂಬುದನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News