ಟೋಕಿಯೊ ಒಲಿಂಪಿಕ್ಸ್ ಇನ್ನಷ್ಟು ವಿಳಂಬ ಅಸಾಧ್ಯ: ಯೊಶಿರೊ ಮೊರಿ

Update: 2020-04-24 08:18 GMT

ಟೋಕಿಯೊ: ಕೋವಿಡ್ -19 ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನ್ನುಈಗಾಗಲೇ ಒಂದು ವರ್ಷ ಮುಂದೂಡಲಾಗಿದ್ದು, ಇನ್ನಷ್ಟು ವಿಳಂಬ ಅಸಾಧ್ಯ ಎಂದು ಒಲಿಂಪಿಕ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಯೊಶಿರೊ ಮೊರಿ ಅಭಿಪ್ರಾಯಪಟ್ಟಿದ್ದಾರೆ.

ಮುಂದೂಡಲ್ಪಟ್ಟ ಒಲಿಂಪಿಕ್ಸ್ ಗೇಮ್ಸ್‌ನ್ನು ಜುಲೈ 23, 2021ಕ್ಕೆ ನಿಗದಿಪಡಿಸಲಾಗಿದೆ. ಮತ್ತೆ ಮುಂದೂಡಲು ಸಾಧ್ಯವಿಲ್ಲ ಎಂದು ಮೊರಿ ಹೇಳಿದ್ದಾರೆ.

  ಆಟಗಾರರ ಮತ್ತು ಸಂಘಟನೆಯ ಹಿತದೃಷ್ಟಿಯಿಂದ ಎರಡು ವರ್ಷಗಳ ತನಕ ಒಲಿಂಪಿಕ್ಸ್‌ನ್ನು ಮುಂದೂಡಲು ಸಾಧ್ಯವಿಲ್ಲ. ಇದಕ್ಕೂ ಮೊದಲು ಜಪಾನ್‌ನ ಪ್ರಧಾನ ಮಂತ್ರಿ ಶಿಂರೊ ಅಬೆ ಅವರಲ್ಲಿ ಕ್ರೀಡಾಕೂಟವನ್ನು ಎರಡು ವರ್ಷಗಳ ಕಾಲ ಮುಂದೂಡಲು ತಮ್ಮ ದೇಶ ಬಯಸುತ್ತದೆಯೇ ಎಂದು ಕೇಳಲಾಗಿತ್ತು. ಆದರೆ ಜಪಾನ್ ಕೇವಲ ಒಂದು ವರ್ಷ ತನಕ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಲು ಒಪ್ಪಿಕೊಂಡಿತ್ತು.

 ಕ್ರೀಡಾಪಟುಗಳು ಮತ್ತು ಕ್ರೀಡಾ ಸಂಘಟನೆಗಳ ಮನವಿ ಮೇರೆಗೆ ಜಪಾನ್‌ನ ಸಂಘಟಕರು ಮತ್ತು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಕಳೆದ ಮಾರ್ಚ್‌ನಲ್ಲಿ ಒಂದು ವರ್ಷದ ಅವಧಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಲು ಒಪ್ಪಿಕೊಂಡಿತ್ತು.

 ವಿಳಂಬವಾದ ಒಲಿಂಪಿಕ್ಸ್ ಕೊರೋನ ವೈರಸ್ ವಿರುದ್ಧ ವಿಶ್ವದ ವಿಜಯೋತ್ಸವವನ್ನು ಪ್ರದರ್ಶಿಸುವ ಅವಕಾಶ ಎಂದು ಸಂಘಟಕರು ಮತ್ತು ಜಪಾನಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಒಂದು ವರ್ಷದ ಮುಂದೂಡಿಕೆ ಸಹ ಸಾಕಾಗಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

  ಈ ವಾರದ ಆರಂಭದಲ್ಲಿ ಕೊರೋನ ವೈರಸ್ ಸೋಂಕು ಹರಡುವಿಕೆಗೆ ಸಂಬಂಧಿಸಿ ದೇಶದ ಪ್ರತಿಕ್ರಿಯೆಯನ್ನು ಟೀಕಿಸಿದ ಜಪಾನಿನ ತಜ್ಞರು ಮುಂದೂಡಲ್ಪಟ್ಟ ಒಲಿಂಪಿಕ್ಸ್‌ನ್ನು 2021ರಲ್ಲಿ ನಡೆಸುವ ಸಾಧ್ಯತೆ ಈಗ ಕಾಣುತ್ತಿಲ್ಲ ಎಂದು ಎಚ್ಚರಿಸಿದ್ದಾರೆ.

 ‘‘ನಿಮ್ಮ್ಮಂದಿಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮುಂದಿನ ವರ್ಷ ಒಲಿಂಪಿಕ್ಸ್ ನಡೆಯುವ ಸಾಧ್ಯತೆ ಇದೆ ಎಂದು ನಾನು ಭಾವಿಸುವುದಿಲ’’ ಎಂದು ಕೋಬ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆಂಟಾರೊ ಇವಾಟಾ ಹೇಳಿದ್ದಾರೆ.

  ಕ್ರೀಡಾಕೂಟವನ್ನು ನಡೆಸಲು ಜಪಾನ್ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಲ್ಲೂ ಕೂಡಾ ವೈರಸ್ ಸೋಂಕು ನಿಯಂತ್ರಣದಲ್ಲಿರಬೇಕು ಎಂದು ಅವರು ಹೇಳಿದರು.

  ಟೋಕಿಯೊ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 30ರ ಹರೆಯದ ಸಿಬ್ಬಂದಿಯೊಬ್ಬರಿಗೆ ಕೊರೋನ ವೈರಸ್ ಸೋಂಕು ತಗಲಿದೆ. ಕ್ರೀಡಾಕೂಟವನ್ನು ಮುಂದೂಡುವುದು ಒಂದು ದೊಡ್ಡ ವ್ಯವಸ್ಥಾಪನಾ ಕಾರ್ಯವಾಗಿದೆ ಮತ್ತು ಗಮನಾರ್ಹವಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ . ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗುತ್ತದೆ ಎಂದು ಕ್ಯೋಡೋ ನ್ಯೂಸ್ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News