"ತಬ್ಲೀಗಿ ವಿದೇಶಿಗರ ಬಗ್ಗೆ ಮೋದಿ ಸರಕಾರಕ್ಕೆ ತಿಳಿದಿತ್ತು, ಅವರನ್ನು ತಡೆಯಬೇಕಿತ್ತು"

Update: 2020-04-26 17:31 GMT

ರಾಯ್‌ಪುರ, ಎ.26: ತಬ್ಲೀಗಿ ಜಮಾಅತ್ ಸದಸ್ಯರಿಂದ ಕೊರೋನ ವೈರಸ್ ಸೋಂಕು ಹರಡಿದ ಪ್ರಕರಣಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ ಎಂದು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಆರೋಪಿಸಿದ್ದಾರೆ.

ತಬ್ಲೀಗಿ ಜಮಾಅತ್‌ನ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶದಿಂದ ಆಗಮಿಸಿದ್ದ ಸದಸ್ಯರ ವಿವರ ಮತ್ತು ಪಟ್ಟಿ ಕೇಂದ್ರ ಸರಕಾರದ ಬಳಿಯಿತ್ತು . ದಿಲ್ಲಿಯಲ್ಲಿ ವಿದೇಶದಿಂದ ಬಂದವರು ಇದ್ದಾರೆ ಎಂದು ಕೇಂದ್ರ ಸರಕಾರಕ್ಕೆ ತಿಳಿದಿತ್ತು. ಹಾಗಿದ್ದರೂ ತಬ್ಲೀಗಿ ಸದಸ್ಯರು ದೇಶದೆಲ್ಲೆಡೆ ಸಂಚರಿಸಲು ಸರಕಾರ ಅವಕಾಶ ನೀಡಬಾರದಿತ್ತು. ನಿಝಾಮುದ್ದೀನ್‌ನಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾರತ ಮತ್ತು ವಿದೇಶಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ತಬ್ಲೀಗಿ ಕೇಂದ್ರ ಕಚೇರಿಯಲ್ಲಿದ್ದ ಸುಮಾರು 2,300 ಜನರನ್ನು ಅಲ್ಲಿಂದ ತೆರವುಗೊಳಿಸಿ ಕ್ವಾರಂಟೈನ್‌ನಲ್ಲಿ ಇರಿಸುವುದಕ್ಕೂ ಮೊದಲೇ ನೂರಾರು ಸದಸ್ಯರು ದೇಶದೆಲ್ಲೆಡೆ ಚದುರಿ ಹೋಗಿದ್ದರು. ಇವರಲ್ಲಿ ಕೆಲವರಿಗೆ ಕೊರೋನ ಸೋಂಕು ತಗುಲಿತ್ತು ಎಂದು ಬಾಘೇಲ್ ಹೇಳಿದ್ದಾರೆ.

107 ತಬ್ಲೀಗಿ ಸದಸ್ಯರ ಪಟ್ಟಿಯನ್ನು ಕೇಂದ್ರ ಸರಕಾರ ಛತ್ತೀಸ್‌ಗಢ ಸರಕಾರಕ್ಕೆ ನೀಡಿದೆ. ಇವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರಲ್ಲಿ ಒಬ್ಬನ ವರದಿ ಮಾತ್ರ ಪಾಸಿಟಿವ್ ಬಂದಿದೆ. ಆದರೆ ಈತ ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಲು ಕಾರಣನಾಗಿದ್ದಾನೆ. ರಾಜ್ಯ ಸರಕಾರ ಸೋಂಕು ಹರಡದಂತೆ ನಿಯಂತ್ರಿಸಿದೆ. ರಾಜ್ಯದಲ್ಲಿ ಸೋಂಕು ದೃಢಪಟ್ಟ 37 ಜನರಲ್ಲಿ 32 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ರಾಜ್ಯದ 23 ಜಿಲ್ಲೆಗಳು ಹಸಿರು ವಲಯದಲ್ಲಿದ್ದರೆ ಕೇವಲ 1 ಜಿಲ್ಲೆ ಮಾತ್ರ ಕೆಂಪು ವಲಯದಲ್ಲಿದೆ. ಮೇ 3ರ ಬಳಿಕ ದೇಶದಲ್ಲಿ ಲಾಕ್‌ಡೌನ್ ಕೊನೆಗೊಂಡರೂ ಛತ್ತೀಸ್‌ಗಢ ರಾಜ್ಯದ ಗಡಿಯನ್ನು ತೆರೆಯುವುದಿಲ್ಲ. ದೇಶದಲ್ಲಿ ಕೊರೋನ ಸೋಂಕು ಪ್ರಕರಣ ಶೂನ್ಯಕ್ಕೆ ಇಳಿದ ಮೇಲೆಯೇ ಗಡಿಯನ್ನು ತೆರೆಯಲಾಗುವುದು ಎಂದ ಅವರು, ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡುವುದನ್ನು ರಾಜ್ಯಗಳ ನಿರ್ಧಾರಕ್ಕೆ ಬಿಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News