×
Ad

ಕೊರೋನ ಪೀಡಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನಕ್ಕೆ ಸಿದ್ಧರಾದ ತಬ್ಲೀಗಿ ಸದಸ್ಯರು

Update: 2020-04-26 23:09 IST
ಫೈಲ್ ಚಿತ್ರ

ಹೊಸದಿಲ್ಲಿ,ಎ.26: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಝಜ್ಜರ್ ಕ್ಯಾಂಪಸ್‌ನಲ್ಲಿ ಕ್ವಾರಂಟೈನ್‌ಗೊಳಗಾಗಿ ರುವ 142 ತಬ್ಲೀಗಿ ಜಮಾಅತ್ ಸದಸ್ಯರ ಪೈಕಿ 129 ಜನರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದು,ಅವರಲ್ಲಿ ಹೆಚ್ಚಿನವರು ದಿಲ್ಲಿಯಲ್ಲಿನ ಕೊರೋನ ವೈರಸ್ ಸೋಂಕು ಪೀಡಿತರ ಪ್ಲಾಸ್ಮಾ ಚಿಕಿತ್ಸೆಗಾಗಿ ತಮ್ಮ ರಕ್ತವನ್ನು ದಾನ ಮಾಡಲು ಸಿದ್ಧರಾಗಿದ್ದಾರೆ.

"ತಮ್ಮ ರಕ್ತವನ್ನು ದಾನ ಮಾಡುವಂತೆ ನಾವು ಚೇತರಿಸಿಕೊಂಡಿರುವ ಕೆಲವು ರೋಗಿಗಳನ್ನು ಕೋರಿಕೊಂಡಿದ್ದು, ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಅವರಿಂದ ರಕ್ತದಾನ ಪಡೆಯಲು ಮತ್ತು ಅವರ ವಸತಿಗಾಗಿ ವ್ಯವಸ್ಥೆಗಳನ್ನು ನಾವೀಗ ರೂಪಿಸುತ್ತಿದ್ದೇವೆ. ತಬ್ಲೀಗಿ ಸದಸ್ಯರು ಭವಿಷ್ಯದ ಸಂಶೋಧನೆಗಾಗಿ ತಮ್ಮ ರಕ್ತದ ಸ್ಯಾಂಪಲ್ ನೀಡಲೂ ಒಪ್ಪಿಕೊಂಡಿದ್ದಾರೆ" ಎಂದು ಝಜ್ಜರ್ ಆಸ್ಪತ್ರೆಯಲ್ಲಿ ಕೋವಿಡ್-19 ಸೇವೆಗಳ ಮುಖ್ಯಸ್ಥೆ ಡಾ.ಸುಷ್ಮಾ ಭಟ್ನಾಗರ್ ತಿಳಿಸಿದರು.

“ವ್ಯಕ್ತಿಯು ಚೇತರಿಸಿಕೊಂಡ ಎರಡು ವಾರಗಳ ಬಳಿಕವೇ ರಕ್ತವನ್ನು ಪಡೆಯಬಹುದಾಗಿದೆ. ಹೆಚ್ಚಿನ ತಬ್ಲೀಗಿ ಸದಸ್ಯರು ದಿಲ್ಲಿಯಿಂದ ಹೊರಗಿನವರಾಗಿದ್ದಾರೆ, ಅವರ ಪೈಕಿ ಕೆಲವರು ವಿದೇಶಿಯರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ಮರಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ವಸತಿಯನ್ನು ಕಲ್ಪಿಸುವ ಮತ್ತು ರಕ್ತದಾನ ವ್ಯವಸ್ಥೆಯ ಬಗ್ಗೆ ನಾವು ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ” ಎಂದು ಭಟ್ನಾಗರ್ ಹೇಳಿದರು.

 ಪ್ಲಾಸ್ಮಾ ಚಿಕಿತ್ಸೆಯಲ್ಲಿ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿ ರುವ ವ್ಯಕ್ತಿಗಳ ರಕ್ತದಿಂದ ಪಡೆಯಲಾದ ಪ್ಲಾಸ್ಮಾವನ್ನು ಈ ರೋಗದಿಂದ ನರಳುತ್ತಿರುವ ವ್ಯಕ್ತಿಗಳ ಶರೀರಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಕೋವಿಡ್-19 ಸೋಂಕಿನಿಂದ ಚೇತರಿಸಿ ಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಕೊರೋನ ವೈರಸ್ ವಿರುದ್ಧ ದಾಳಿ ನಡೆಸುವ ಪ್ರತಿಕಾಯಗಳು ಉತ್ಪತ್ತಿಯಾಗಿರುತ್ತವೆ. ಪ್ಲಾಸ್ಮಾದಲ್ಲಿರುವ ಬಿ ಲಿಂಫೋಸೈಟ್ಸ್‌ಗಳೆಂದು ಕರೆಯಲಾಗುವ ನಿರೋಧಕ ಕೋಶಗಳು ಈ ಪ್ರತಿಕಾಯಗಳನ್ನು ಸ್ರವಿಸುತ್ತವೆ. ರೋಗಿಯು ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಾಗ ಈ ಪ್ರತಿಕಾಯಗಳು ಉತ್ಪಾದನೆಯಾಗಿ ಭವಿಷ್ಯದಲ್ಲಿ ಮತ್ತೆ ಸೋಂಕಿಗೆ ಗುರಿಯಾದರೆ ಅದನ್ನು ಎದುರಿಸಲು ರಕ್ತದಲ್ಲಿ ಉಳಿದುಕೊಂಡಿರುತ್ತವೆ.

ದಿಲ್ಲಿಯ ಮ್ಯಾಕ್ಸ್ ಸಾಕೇತ್ ಆಸ್ಪತ್ರೆಗೆ ದಾಖಲಾಗಿದ್ದ 49ರ ಹರೆಯದ ವ್ಯಕ್ತಿ ಪ್ಲಾಸ್ಮಾ ಚಿಕಿತ್ಸೆಗೊಳಗಾದ ಮೊದಲ ಭಾರತೀಯನಾಗಿದ್ದು,ಈ ಚಿಕಿತ್ಸೆಯಿಂದ ಆತ ತ್ವರಿತವಾಗಿ ಚೇತರಿಸಿಕೊಂಡಿದ್ದಾನೆ ಎಂದು ಆತನ ವೈದ್ಯರು ತಿಳಿಸಿದ್ದಾರೆ. ಒಂದು ವಾರಕ್ಕೂ ಅಧಿಕ ಸಮಯ ವೆಂಟಿಲೇಟರ್‌ನಲ್ಲಿದ್ದ ಈ ರೋಗಿಯನ್ನು ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮೂರು ದಿನಗಳ ಹಿಂದೆ ವೆಂಟಿಲೇಟರ್‌ನ್ನು ತೆಗೆಯಲಾಗಿದ್ದು ಸಹಜವಾಗಿ ಉಸಿರಾಡಿಸುತ್ತಿ ದ್ದಾನೆ.

 ಅತ್ತ ನಿಝಾಮುದ್ದೀನ್‌ನ ಅಲಾಮಿ ಮರ್ಕಝ್ ಬಂಗ್ಲೆವಾಲಿ ಮಸೀದಿಯಿಂದ ತೆರವುಗೊಳಿಸಿ ಲೋಕನಾಯಕ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಿದ್ದ ಹೆಚ್ಚಿನ ತಬ್ಲೀಗಿ ಸದಸ್ಯರು ಚೇತರಿಸಿಕೊಂಡಿ ದ್ದಾರೆ. ರಕ್ತದಾನ ಮಾಡುವಂತೆ ಅವರ ಪೈಕಿ ಸುಮಾರು ಶೇ.20ರಷ್ಟು ಜನರನ್ನು ಕೋರಿದ್ದು,ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜೆ.ಸಿ.ಪಾಸ್ಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News