ಸುದೀರ್ಘ ಲಾಕ್‌ಡೌನ್‌ನಿಂದ ಮಿಲಿಯಗಟ್ಟಲೆ ಜನತೆ ಬಡತನದ ದವಡೆಗೆ: ಆರ್‌ಬಿಐ ಮಾಜಿ ಗವರ್ನರ್ ಸುಬ್ಬಾರಾವ್

Update: 2020-04-26 17:52 GMT

ಹೊಸದಿಲ್ಲಿ, ಎ.26: ದೀರ್ಘಾವಧಿಯ ಲಾಕ್‌ಡೌನ್ ಭಾರತದ ಮಿಲಿಯಗಟ್ಟಲೆ ಜನರನ್ನು ಬಡತನದ ದವಡೆಗೆ ತಳ್ಳುವ ಸಾಧ್ಯತೆಯಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ದುವ್ವರಿ ಸುಬ್ಬಾರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರ್ಜಾಲದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೋನ ಬಿಕ್ಕಟ್ಟಿಗಿಂತ ಎರಡು ತಿಂಗಳ ಮೊದಲೂ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಕುಂಠಿತವಾಗಿತ್ತು ಎಂಬುದನ್ನು ಮರೆಯಬಾರದು. ಈಗ ಆರ್ಥಿಕತೆಯ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದ ವರ್ಷ ಅಭಿವೃದ್ಧಿಯ ದರ 5% ಆಗಿತ್ತು. ಒಮ್ಮೆ ಕಲ್ಪಿಸಿಕೊಳ್ಳಿ, ಕಳೆದ ವರ್ಷ 5% ದರದ ಅಭಿವೃದ್ಧಿ, ಈ ವರ್ಷ ಶೂನ್ಯ ದರದ ಅಭಿವೃದ್ಧಿ. ಕೊರೋನ ವೈರಸ್‌ನ ಹಾವಳಿ ನಿಯಂತ್ರಣಕ್ಕೆ ಬಂದ ಬಳಿಕ ಭಾರತ ಇತರ ದೇಶಗಳಿಗಿಂತ ಕ್ಷಿಪ್ರ ವೇಗದಲ್ಲಿ ಆರ್ಥಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ ಎಂದವರು ಅಭಿಪ್ರಾಯಪಟ್ಟರು.

ಈಗಿನ ಪರಿಸ್ಥಿತಿಯನ್ನು ಇತರ ಹೆಚ್ಚಿನ ದೇಶಗಳಿಗಿಂತ ಭಾರತ ಉತ್ತಮವಾಗಿ ನಿರ್ವಹಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ನಾವು ಬಡ ದೇಶವಾಗಿದ್ದು , ಲಾಕ್‌ಡೌನ್ ಶೀಘ್ರ ಕೊನೆಯಾಗದಿದ್ದರೆ ದೇಶದ ಮಿಲಿಯಾಂತರ ಜನತೆ ಬಡತನದ ಕೂಪಕ್ಕೆ ಜಾರಬಹುದು ಎಂದವರು ಎಚ್ಚರಿಸಿದರು.

ತಜ್ಞರು ವಿಶ್ಲೇಷಿಸಿದಂತೆ ಭಾರತ ‘ವಿ’ ಮಾದರಿಯಲ್ಲಿ ಚೇತರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಯಾಕೆಂದರೆ ನಮ್ಮ ಯಾವುದೇ ನಗರ ನಾಶವಾಗಿಲ್ಲ. ಅಂಗಡಿ, ಕೈಗಾರಿಕೆಗಳೂ ಸುಸ್ಥಿತಿಯಲ್ಲಿವೆ. ಲಾಕ್‌ಡೌನ್    ಕೊನೆಗೊಂಡರೆ ಕೆಲಸ ಮಾಡಲು ನಮ್ಮ ಜನರೂ ಸಿದ್ಧರಾಗಿದ್ದಾರೆ ಎಂದರು.

ಹಾಲಿ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 1.9% ದರದಲ್ಲಿ ಅಭಿವೃದ್ಧಿಯಾಗಬಹುದು ಎಂಬ ಐಎಂಎಫ್‌ನ ಭವಿಷ್ಯವಾಣಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಭವಿಷ್ಯ ಹಳತಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಜಿಡಿಪಿ ಶೂನ್ಯ ದರಕ್ಕೆ ಇಳಿಯಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News