×
Ad

ಚೀನಾದ ಕೊರೋನ ಟೆಸ್ಟ್ ಕಿಟ್‍ಗಳನ್ನು ದುಪ್ಪಟ್ಟು ಬೆಲೆ ತೆತ್ತು ಖರೀದಿಸಿದ ಭಾರತ: ವರದಿ

Update: 2020-04-27 14:42 IST

ಹೊಸದಿಲ್ಲಿ: ದೋಷಪೂರಿತ ಫಲಿತಾಂಶ ನೀಡುತ್ತಿವೆ ಎಂಬ ಕಾರಣಕ್ಕೆ ಈಗಾಗಲೇ ಹಲವು ರಾಜ್ಯಗಳು ಬಳಸುವುದನ್ನು ನಿಲ್ಲಿಸಿರುವ ಚೀನಾದಿಂದ ಆಮದು ಮಾಡಲಾದ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್‍ ಗಳಿಗೆ ಭಾರತ ದುಪ್ಪಟ್ಟು ಹಣ ತೆತ್ತಿದೆ ಎಂದು ndtv.com ವರದಿ ಮಾಡಿದೆ.

ಭಾರತೀಯ ಡಿಸ್ಟ್ರಿಬ್ಯೂಟರ್ ಸಂಸ್ಥೆ ರಿಯಲ್ ಮೆಟಬಾಲಿಕ್ಸ್ ಈ ಕೋವಿಡ್-19 ಟೆಸ್ಟ್ ಕಿಟ್‍ ಗಳನ್ನು ಹೆಚ್ಚಿನ ಬೆಲೆಗೆ ಸರಕಾರಕ್ಕೆ ಮಾರಾಟ ಮಾಡಿದೆಯೆಂಬುದು ಇದೀಗ ದಿಲ್ಲಿ ಹೈಕೋರ್ಟ್ ಮೆಟ್ಟಿಲು ಹತ್ತಿರುವ ಡಿಸ್ಟ್ರಿಬ್ಯೂಟರ್ ಹಾಗೂ ಆಮದುದಾರರ ನಡುವಿನ ಕಾನೂನು ಸಮರದಿಂದ ತಿಳಿದು ಬಂದಿದೆ.

ಭಾರತ ಸರಕಾರವು ಐಸಿಎಂಆರ್ ಮೂಲಕ ಐದು ಲಕ್ಷ ಟೆಸ್ಟ್ ಕಿಟ್ ‍ಗಳಿಗೆ ಚೀನೀ ಸಂಸ್ಥೆ ವೊಂಡ್ಫೊಗೆ ಮಾರ್ಚ್ 27ರಂದು ಬೇಡಿಕೆ ಸಲ್ಲಿಸಿತ್ತು. ಐಸಿಎಂಆರ್ ಹಾಗೂ ಭಾರತದಲ್ಲಿ ಕೊರೋನವೈರಸ್ ರೆಸ್ಪಾನ್ಸ್ ಗೆ ನೋಡಲ್ ಸಂಸ್ಥೆಯಾಗಿರುವ ಆರ್ಕ್ ಫಾರ್ಮಾಸ್ಯೂಟಿಕಲ್ಸ್ ನಡುವೆ ಸಹಿ ಹಾಕಲಾದ ಖರೀದಿ ಆರ್ಡರ್ ಪ್ರತಿ ತನ್ನ ಬಳಿ ಇದೆ ಎಂದು ndtv.com ಹೇಳಿಕೊಂಡಿದೆ.

ಎಪ್ರಿಲ್ 16ರಂದು ಚೀನಾದಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಟ್ವೀಟ್ ಮಾಡಿ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಹಾಗೂ ಆರ್‍ ಎನ್‍ಎ ಎಕ್ಸ್ ಟ್ರಾಕ್ಷನ್ ಕಿಟ್ ಸಹಿತ 6.5 ಲಕ್ಷ ಟೆಸ್ಟ್ ಕಿಟ್‍ಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದಿದ್ದರು.

ಆಮದು ಸಂಸ್ಥೆ ಮ್ಯಾಟ್ರಿಕ್ಸ್ ಇವುಗಳನ್ನು ಚೀನಾದಿಂದ ತಲಾ ಕಿಟ್‍ಗೆ ರೂ 245ರಂತೆ ಖರೀದಿಸಿತ್ತು. ಆದರೂ ಡಿಸ್ಟ್ರಿಬ್ಯೂಟರ್ ಸಂಸ್ಥೆಗಳಾದ ರಿಯಲ್ ಮೆಟಬಾಲಿಕ್ಸ್ ಹಾಗೂ ಆರ್ಕ್ ಫಾರ್ಮಾಸ್ಯೂಟಿಕಲ್ಸ್ ಅವುಗಳನ್ನು ಸರಕಾರಕ್ಕೆ ತಲಾ ರೂ. 600ರಂತೆ, ಅಂದರೆ ಶೇ. 60ರಷ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದವು. ತಮಿಳುನಾಡು ಸರಕಾರ ಕೂಡ ಇದೇ ಕಿಟ್ ‍ಗಳನ್ನು ಮ್ಯಾಟ್ರಿಕ್ಸ್ ಮೂಲಕ ಇನ್ನೊಂದು ಡಿಸ್ಟ್ರಿಬ್ಯೂಟರ್ ಸಂಸ್ಥೆ ಶಾನ್ ಬಯೋಟೆಕ್‍ ನಿಂದ ತಲಾ ರೂ 600ರ ಬೆಲೆಗೆ ಖರೀದಿಸಿದಾಗ ಸಮಸ್ಯೆ ಆರಂಭಗೊಂಡಿತ್ತು. ಈ ನಿಟ್ಟಿನಲ್ಲಿನ ಪರ್ಚೇಸ್ ಆರ್ಡರ್ ಪ್ರತಿ ಕೂಡ ತನ್ನ ಬಳಿ ಇದೆ ಎಂದು ಎನ್‍ ಡಿಟಿವಿ ವರದಿ ಮಾಡಿದೆ.

ರಿಯಲ್ ಮೆಟಬಾಲಿಕ್ಸ್ ಹೈಕೋರ್ಟ್ ಕದ ತಟ್ಟಿ ಮ್ಯಾಟ್ರಿಕ್ಸ್ ಆಮದು ಮಾಡಿದ ಕಿಟ್‍ಗಳ ಏಕೈಕ ವಿತರಕ ಸಂಸ್ಥೆ ತಾನೆಂದು ವಾದಿಸಿತ್ತಲ್ಲದೆ ತಮಿಳುನಾಡಿನ ಶಾನ್ ಬಯೋಟೆಕ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತು.

ವಿಚಾರಣೆ ಸಂದರ್ಭ ಕಿಟ್ ಬೆಲೆಗಳು ಹೆಚ್ಚಾಗಿದೆ ಎಂದು ತಿಳಿದ ನ್ಯಾಯಾಲಯ ಕಿಟ್ ಬೆಲೆಯನ್ನು  ಜಿಎಸ್‍ಟಿ ಸಹಿತ ರೂ 400ಕ್ಕಿಂತ ಹೆಚ್ಚಿನ ಬೆಲೆಗೆ  ಈಗಿನ ಪರಿಸ್ಥಿತಿಯಲ್ಲಿ ಮಾರಾಟ ಮಾಡಬಾರದೆಂದೂ ಸೂಚಿಸಿತು.

ಕಿಟ್‍ಗಳ ಬೆಲೆ ಹೆಚ್ಚೇಕೆ ಆಗಿತ್ತು ಎಂಬುದಕ್ಕೆ ಐಸಿಎಂಆರ್ ಪ್ರತಿಕ್ರಿಯಿಸಿ ರ್ಯಾಪಿಡ್ ಟೆಸ್ಟ್ ಕಿಟ್‍ ಗಳಿಗೆ ರೂ 528ರಿಂದ ರೂ 795 ತನಕದ ಶ್ರೇಣಿಗೆ ಅನುಮೋದನೆ ನೀಡಲಾಗಿತ್ತು. ಕಿಟ್‍ಗಳ ವಿವಿಧ ಅಂಶಗಳನ್ನು ಆಧರಿಸಿ ಬೆಲೆ ಇರುತ್ತದೆ ಎಂದೂ ಅದು ಹೇಳಿದೆ.

ಈಗಾಗಲೇ ಮೂರು ರಾಜ್ಯಗಳು ಈ ಕಿಟ್ ಗಳು ದೋಷಪೂರಿತ ಎಂದು ದೂರಿದ ನಂತರ ಅವುಗಳ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಐಸಿಎಂಆರ್ ಸೂಚಿಸಿದೆ. ಆದರೆ ಚೀನಾ ಮಾತ್ರ ತಾನು ರಫ್ತು ಮಾಡಿದ ಕಿಟ್‍ಗಳು ದೋಷಪೂರಿತವಾಗಿಲ್ಲ ಎಂದು ಹೇಳಿಕೊಂಡಿದೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News