×
Ad

ಲಾಕ್‌ಡೌನ್ ವಿಸ್ತರಣೆಗೆ 6 ಸಿಎಂಗಳ ಒತ್ತಾಯ

Update: 2020-04-27 23:51 IST

ಹೊಸದಿಲ್ಲಿ, ಎ.27: ಮೇ 3ರ ಬಳಿಕವೂ ಲಾಕ್‌ಡೌನ್ ವಿಸ್ತರಿಸಬೇಕೆಂದು ಆರು ರಾಜ್ಯಗಳ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ. ದೇಶದಲ್ಲಿ ಈಗ ಕೊರೋನ ಸೋಂಕಿನ ಪರಿಸ್ಥಿತಿ ಬಗ್ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ಸಂದರ್ಭ ಈ ಬೇಡಿಕೆ ಮುಂದಿರಿಸಲಾಗಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕನಿಷ್ಟ ಮೇ 21ರವರೆಗೆ ಲಾಕ್‌ಡೌನ್ ವಿಸ್ತರಿಸುವಂತೆ ಆಗ್ರಹಿಸಿದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ, ಗೋವಾದ ಪ್ರಮೋದ್ ಸಾವಂತ್, ಹಿಮಾಚಲ ಪ್ರದೇಶದ ಜೈರಾಮ್ ಠಾಕೂರ್, ಮಿಝೊರಾಂನ ರೊರಾಮ್‌ಥಂಗ, ಮೇಘಾಲಯದ ಕೊನ್ರಾಡ್ ಸಂಗ್ಮ ಕೂಡಾ ಲಾಕ್‌ಡೌನ್ ವಿಸ್ತರಿಸಬೇಕೆಂಬ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ.

ಸುದ್ಧಿಗಾರರ ಜೊತೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೆಲವೊಂದು ವಿನಾಯಿತಿಯ ಜೊತೆಗೆ ಲಾಕ್‌ಡೌನ್ ವಿಸ್ತರಿಸಬೇಕು ಎಂದರು.

ಪ್ರಧಾನಿಯೊಂದಿಗಿನ ಸಂವಾದದ ಸಂದರ್ಭದಲ್ಲಿ ಅವರಿಗೂ ಲಾಕ್‌ಡೌನ್ ವಿಸ್ತರಿಸುವ ಇಂಗಿತವಿದೆ ಎಂಬುದು ಮನವರಿಕೆಯಾಗಿದೆ ಎಂದು ಮಮತಾ ಹೇಳಿದರು. ಒಡಿಶಾದಲ್ಲಿ ಲಾಕ್‌ಡೌನ್ ಮುಂದುವರಿಯದಿದ್ದಲ್ಲಿ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾಗಿದೆ. ಒಂದು ತಿಂಗಳು ಬೇಕಾದರೂ ಮುಂದುವರಿಯಲಿ. ಏನಾಗುತ್ತದೆ ನೋಡೋಣ ಎಂದು ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್‌ದಾಸ್ ಹೇಳಿದ್ದಾರೆ. ಪ್ರಧಾನಿಯೊಂದಿಗೆ ನಡೆದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ದಾಸ್ ಹಾಗೂ ಮುಖ್ಯಮಂತ್ರಿ ನವೀನ್ ಪಟ್ಣಾಯಕ್ ಭಾಗವಹಿಸಿದ್ದರು.

ಗಡಿಗಳನ್ನು ಸೀಲ್ ಮಾಡಿ, ರಾಜ್ಯದೊಳಗೆ ಸೀಮಿತವಾಗಿ ಕೆಲವು ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿ ಲಾಕ್‌ಡೌನ್ ವಿಸ್ತರಿಸುವಂತೆ ಕೋರಿ ಪ್ರಧಾನಿಗೆ ಶೀಘ್ರ ಪತ್ರ ಬರೆಯುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಸಿರು ವಲಯ, ಕೊರೋನ ಸೋಂಕಿನ ಪ್ರಭಾವವಿಲ್ಲದ ಜಿಲ್ಲೆಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್‌ಡೌನ್ ಮುಂದುವರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿರೆರಾಂನ ಮುಖ್ಯಮಂತ್ರಿ ರೊರಮ್‌ಥಂಗ, ತಮ್ಮ ರಾಜ್ಯವು ಬಾಂಗ್ಲಾ, ಮ್ಯಾನ್ಮಾರ್ ಹಾಗೂ ಕೊರೋನ ಸೋಂಕಿತರಿರುವ ನೆರೆಯ ರಾಜ್ಯಗಳಿಂದ ಸುತ್ತುವರಿದಿದ್ದು, ನಾವು ಅಲಕ್ಷದಿಂದ ಇರಲು ಸಾಧ್ಯವಿಲ್ಲ ಎಂದರು.

ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡುವುದು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಟ್ಟಿದ್ದು ಮತ್ತು ಪರಿಸ್ಥಿತಿ ಸುಧಾರಿಸಿದ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ರದ್ದುಗೊಳಿಸಲಾಗುವುದು ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News