ಕೊರೋನ ಚಿಕಿತ್ಸೆ: 350 ತಬ್ಲೀಗಿಗಳಿಂದ ಪ್ಲಾಸ್ಮಾ ದಾನ

Update: 2020-04-28 04:56 GMT

ಹೊಸದಿಲ್ಲಿ, ಎ.28: ಕೋವಿಡ್-19 ಸೋಂಕಿತರಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇಲ್ಲಿನ ಲೋಕನಾಯಕ ಆಸ್ಪತ್ರೆ ಬಳಿಕ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯಲ್ಲೂ ಪ್ಲಾಸ್ಮಾ ಚಿಕಿತ್ಸೆ ಆರಂಭಿಸಲಾಗಿದೆ. ತಬ್ಲೀಗಿ ಜಮಾಅತ್ ಸಂಘಟನೆಯ 350ಕ್ಕೂ ಹೆಚ್ಚು ಅರ್ಹ ದಾನಿಗಳಿಂದ ಪ್ಲಾಸ್ಮಾ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಸುಲ್ತಾನಪುರಿ ಹಾಗೂ ನರೇಲಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ಲಾಸ್ಮಾ ಸಂಗ್ರಹಿಸುವ ಕಾರ್ಯ ನಡೆದಿದ್ದು, 25 ಮಂದಿಯಿಂದ ಈಗಾಗಲೇ ಪ್ಲಾಸ್ಮಾ ಸಂಗ್ರಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಕನ್ವಲ್ಸೆಂಟ್ ಪ್ಲಾಸ್ಲಾ ಥೆರಪಿ ಎಂಬ ಚಿಕಿತ್ಸಾ ವಿಧಾನದಲ್ಲಿ ರಕ್ತದಲ್ಲಿನ ಪ್ಲಾಸ್ಮಾವನ್ನು ಕೋವಿಡ್-19 ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ವೈರಸ್‌ನೊಂದಿಗೆ ಹೋರಾಡಬಲ್ಲ ಆ್ಯಂಟಿಬಾಡಿಗಳು, ತೀವ್ರ ಅಸ್ವಸ್ಥರಾಗಿರುವ ರೋಗಿಗಳ ಚೇತರಿಕೆಗೆ ನೆರವಾಗುತ್ತವೆ.

ಈಗಾಗಲೇ ಹಲವು ಮಂದಿಯಿಂದ ಪ್ಲಾಸ್ಮಾ ಸಂಗ್ರಹಿಸಲಾಗಿದ್ದು, ಚಿಕಿತ್ಸೆಗೆ ಸೂಕ್ತ ರೋಗಿಗಳನ್ನು ಹುಡುಕಾಡುತ್ತಿದ್ದೇವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಯಾರಾದರೂ ಈ ಚಿಕಿತ್ಸಾ ವಿಧಾನಕ್ಕೆ ಒಪ್ಪಿಗೆ ಸೂಚಿಸಿದಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತದೆ ಎಂದು ಎಐಐಎಂಎಸ್ ವೈದ್ಯಕೀಯ ಅಧೀಕ್ಷಕ ಡಾ.ಡಿ.ಕೆ.ಶರ್ಮಾ ಹೇಳಿದ್ದಾರೆ.

ಉಸಿರಾಟದ ದರ 30ಕ್ಕಿಂತ ಅಧಿಕ ಇರುವ (ವಾಡಿಕೆಯಂತೆ 20 ಇರಬೇಕು) ಮತ್ತ ಆಮ್ಲಜನಕದ ಗರಿಷ್ಠ ಪ್ರಮಾಣ ಶೇಕಡ 90ಕ್ಕಿಂತ ಕಡಿಮೆ ಇರುವ (ವಾಡಿಕೆಯಂತೆ 95ರಿಂದ 100 ಇರಬೇಕು) ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ. ಶ್ವಾಸಕೋಶದಲ್ಲಿ ಕೀವು ತುಂಬಿದ ಸಂದರ್ಭದಲ್ಲಿ ಕೂಡಾ ಈ ಚಿಕಿತ್ಸಾ ವಿಧಾನ ಅನುಸರಿಸಲಾಗುತ್ತದೆ.

ಸೋಂಕು ತಗುಲಿರುವ ಶಂಕೆ ಇರುವವರನ್ನು ಹೊಸ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಿಕೊಳ್ಳಲಾಗುತ್ತಿದ್ದು, ರೋಗಲಕ್ಷಣ ತೀವ್ರ ಸ್ವರೂಪದ್ದಲ್ಲದಿದ್ದರೆ ಅವರನ್ನು ಝಜ್ಜಾರ್ ಎಐಐಎಂಎಸ್‌ಗೆ ಕಳುಹಿಸಲಾಗುತ್ತದೆ. ತೀವ್ರ ಸ್ವರೂಪದ ರೋಗ ಇದ್ದಲ್ಲಿ ಎಐಐಎಂಎಸ್ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಕೋವಿಡ್-19 ಸೋಂಕು ಚಿಕಿತ್ಸೆಗೆ ಲಸಿಕೆ ಅಥವಾ ಔಷಧ ಇಲ್ಲದ ಹಿನ್ನೆಲೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News