ಉತ್ತರಪ್ರದೇಶ: ದೇವಸ್ಥಾನದಲ್ಲಿ ಇಬ್ಬರು ಸಾಧುಗಳ ಮೃತದೇಹ ಪತ್ತೆ; ಓರ್ವನ ಬಂಧನ
ಬುಲಂದ್‌ಶಹರ್, ಎ.28: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಇಬ್ಬರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹೊಡೆದುಕೊಂದ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ದೇವಸ್ಥಾನದಲ್ಲಿ ಇಬ್ಬರು ಸಾಧುಗಳ ಬರ್ಬರ ಹತ್ಯೆ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನೂಪ್‌ಶಹರ್ ಕೊಟ್ವಾಲಿ ವ್ಯಾಪ್ತಿಯಲ್ಲಿರುವ ಪಾಗೊನಾ ಹಳ್ಳಿಯೊಂದರಲ್ಲಿ ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಮುಖ್ಯಮಂತ್ರಿ ಆದಿತ್ಯನಾಥ್ ಘಟನಾ ಸ್ಥಳದಿಂದ ಸಂಪೂರ್ಣ ವಿವರ ನೀಡುವಂತೆ ಹಾಗೂ ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೃತಪಟ್ಟ ಇಬ್ಬರು ಸಾಧುಗಳನ್ನು ಜಗದೀಶ್ ಅಲಿಯಾಸ್ ರಂಗಿದಾಸ್(55 ವರ್ಷ) ಹಾಗೂ ಶೇರ್ ಸಿಂಗ್ ಅಲಿಯಾಸ್ ಸೇವಾ ದಾಸ್(45 ವರ್ಷ)ಎಂದು ಗುರುತಿಸಲಾಗಿದೆ. ಈ ಇಬ್ಬರು ಹಳ್ಳಿಯಲ್ಲಿನ ಸ್ಥಳೀಯ ಶಿವ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದರು.
ಈ ಇಬ್ಬರನ್ನು ಹರಿತವಾದ ಆಯುಧದಿಂದ ಹತ್ಯೆಗೈಯ್ಯಲಾಗಿದೆ. ನೆರೆಯ ಹಳ್ಳಿಯೊಂದರಿಂದ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಬಾಬಾಗಳು ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಮುರೈ ಅಲಿಯಾಸ್ ರಾಜು ಎಂಬಾತನು ಸಾಧು ಬಳಿ ಇದ್ದ ಇಕ್ಕುಳವನ್ನು ತೆಗೆದುಕೊಂಡು ಹೋಗಿದ್ದ. ಇದಕ್ಕಾಗಿ ಸಾಧುಗಳು ರಾಜುವಿಗೆ ಗದರಿಸಿ, ನಿಂದಿಸಿದ್ದರು. ಸಾಧುಗಳು ಕಳ್ಳತನ ಆರೋಪ ಮಾಡಿದ ಬಳಿಕ ರಾಜು ಕೆರಳಿದ್ದ. ಕಳೆದ ರಾತ್ರಿ ಗಾಂಜಾ ಸೇವಿಸಿ ದೇವಸ್ಥಾನಕ್ಕೆ ತೆರಳಿದ್ದ ರಾಜು ಹರಿತವಾದ ಆಯುಧದಿಂದ ಹತ್ಯೆಗೈದಿದ್ದಾನೆ. ಕೊಲೆಯ ಬಳಿಕ ಗ್ರಾಮಸ್ಥರು ರಾಜುವಿಗಾಗಿ ಹುಡುಕಾಟ ನಡೆಸಿದ್ದರು. ಕನಿಷ್ಠ ಬಟ್ಟೆ ಧರಿಸಿದ್ದ ರಾಜು ಮಾದಕದ್ರವ್ಯ ಸೇವಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.