×
Ad

ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2020-04-28 13:34 IST

ಲಕ್ನೋ: ಮುಸ್ಲಿಂ ಮಾರಾಟಗಾರರಿಂದ ಯಾರೂ ತರಕಾರಿಗಳನ್ನು ಖರೀದಿಸಬಾರದೆಂದು ಹೇಳುವ ಮೂಲಕ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಬರ್ಹಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್  ತಿವಾರಿ ವಿವಾದಕ್ಕೀಡಾಗಿದ್ದಾರೆ. ಈ ಕುರಿತಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಒಂದು ವಿಷಯ ನೆನಪಿಡಿ. ನಾನು ಎಲ್ಲರಿಗೂ ಬಹಿರಂಗವಾಗಿ ಹೇಳುತ್ತಿದ್ದೇನೆ. ಯಾರು ಕೂಡ ಮುಸ್ಲಿಮರಿಂದ ತರಕಾರಿಗಳನ್ನು ಖರೀದಿಸಬಾರದು'' ಎಂದು ತಿವಾರಿ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಬರ್ಹಜ್ ನಗರಪಾಲಿಕಾ ಕಚೇರಿಗೆ ತಾವು ಕಳೆದ ವಾರ ಹೋಗಿದ್ದ ಸಂದರ್ಭ ಅಲ್ಲಿ ಸರಕಾರಿ ಅಧಿಕಾರಿಗಳು ಸಹಿತ ಇತರರನ್ನುದ್ದೇಶಿಸಿ ತಾವು ಮೇಲಿನ ಮಾತುಗಳನ್ನು ಹೇಳಿದ್ದಾಗಿ ಶಾಸಕ ಹೇಳಿಕೊಂಡಿದ್ದಾರೆ.

“ಕೊರೋನ ವೈರಸ್ ಹರಡುವ ಉದ್ದೇಶದಿಂದ ಒಂದು ಕೋಮಿನ ಜನರು  ತರಕಾರಿಗಳಿಗೆ ತಮ್ಮ ಉಗುಳನ್ನು ತಾಗಿಸಿ ಅವುಗಳಿಗೆ ಸೋಂಕು ಹತ್ತಿಸಿ ಮಾರಾಟ ಮಾಡುತ್ತಿದ್ದಾರೆಂಬ ದೂರುಗಳನ್ನು  ಕೇಳಿ ಈ ಮಾತುಗಳನ್ನು ಹೇಳಿದ್ದೇನೆ'' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾವು ಕೇವಲ ಸಲಹೆ ನೀಡಿದ್ದು ಮಾತ್ರ, ಅವುಗಳನ್ನು ಪಾಲಿಸುವುದು ಬಿಡುವುದು ಜನರಿಗೆ ಬಿಟ್ಟಿದ್ದು ಎಂದೂ ಅವರು ಹೇಳಿದ್ದಾರೆ. “ದೇಶದಲ್ಲಿ ಜಮಾತ್ ಸದಸ್ಯರು ಏನು ಮಾಡಿದ್ದಾರೆಂಬುದನ್ನು ಎಲ್ಲರೂ ನೋಡಿದ್ದಾರೆ'' ಎಂದು ದಿಲ್ಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲೀಗಿ ಜಮಾತ್ ಸಮಾವೇಶವನ್ನು ಉಲ್ಲೇಖಿಸಿ ಅವರು ಹೇಳಿದರು.

ತಮ್ಮ ಪಕ್ಷ ಇಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ, ತಿವಾರಿ ಯಾವ ಸನ್ನಿವೇಶದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆಂಬುದನ್ನು ಪರಿಶೀಲಿಸಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News