2015ರ ಘಟನೆಯನ್ನು ತಿರುಚಿ ‘ತಬ್ಲೀಗಿಗಳು ಆಹಾರಕ್ಕೆ ಮಲ ಬೆರೆಸುತ್ತಿದ್ದಾರೆ’ ಎಂದು ಸುಳ್ಳು ಪ್ರಕಟಿಸಿದ ‘ಝೀ ನ್ಯೂಸ್’

Update: 2020-04-28 09:02 GMT

ಹೊಸದಿಲ್ಲಿ: ಎಪ್ರಿಲ್ 24ರಂದು ಝೀ ನ್ಯೂಸ್ ‘ಮನುಷ್ಯ ದೇಹದ ತ್ಯಾಜ್ಯದ ಜತೆ ಕಬಾಬ್ ಬಡಿಸಲಾಯಿತು, ಜಮಾತಿಗಳ ಮನೋಸ್ಥಿತಿ ವಿದೇಶಗಳಲ್ಲೂ ಇದೆ’ ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಇದೀಗ ಅಪ್ಡೇಟ್ ಮಾಡಲಾಗಿದೆ. “ಮೂಲಭೂತವಾದದಿಂದ ನೀವು ಎಷ್ಟರ ಮಟ್ಟಿಗೆ ರಕ್ಷಿಸಿಕೊಳ್ಳಬಹುದು?, ಭಾರತದಲ್ಲಿ ಮಾತ್ರವಲ್ಲ ಇಂತಹ ಮನೋಸ್ಥಿತಿ ವಿಶ್ವದಾದ್ಯಂತವಿದೆ. ಬ್ರಿಟನ್ ದೇಶದಲ್ಲಿ ಮುಹಮ್ಮದ್ ಅಬ್ದುಲ್ ಬಾಸಿತ್ ಹಾಗೂ ಅಮ್ಜದ್ ಭಟ್ಟಿ ಎಂಬ ಇಬ್ಬರು ಮಾನವ ದೇಹದ ತ್ಯಾಜ್ಯವನ್ನು ಮುಸ್ಲಿಮೇತರ ಗ್ರಾಹಕರಿಗೆ ನೀಡುತ್ತಿದ್ದಾರೆ'' ಎಂದು ಆರಂಭದಲ್ಲಿ ಪ್ರಕಟವಾದ ವರದಿಯಲ್ಲಿ ಬರೆಯಲಾಗಿತ್ತು.

ಈ ಲೇಖನವನ್ನು ಫೇಸ್ ಬುಕ್‍ ನಲ್ಲಿ  12,000 ಮಂದಿ ಶೇರ್ ಮಾಡಿ  14,000 ಮಂದಿ ಲೈಕ್ ಮಾಡಿದ್ದಾರೆ. “ಅವರು ಮುಸ್ಲಿಮೇತರರ ಜತೆ ದುರ್ವರ್ತನೆ ತೋರಿದ್ದರು, ಸತ್ಯ ಹೊರಬಿದ್ದಿದೆ” ಎಂದೂ ಬರೆಯಲಾಗಿತ್ತು.

“ಬ್ರಿಟನ್ ನಲ್ಲಿ ಇಬ್ಬರು ರೆಸ್ಟಾರೆಂಟ್ ಮಾಲಕರಿದ್ದರು- ಮುಹಮ್ಮದ್ ಅಬ್ದುಲ್ ಬಾಸಿತ್ ಹಾಗೂ ಅಮ್ಜದ್ ಭಟ್ಟಿ. ವರದಿಗಳ ಪ್ರಕಾರ ಅವರು ಮಾನವರ ಮಲವನ್ನು ಆಹಾರದ ಜತೆ ಬೆರೆಸಿ ಮುಸ್ಲಿಮೇತರರಿಗೆ ನೀಡುತ್ತಿದ್ದಾರೆ. ಅವರು ಬಹಳ ಸಮಯದಿಂದ ನಾಟಿಂಗ್‍ ಹ್ಯಾಂ ಪ್ರದೇಶದಲ್ಲಿ  ರೆಸ್ಟಾರೆಂಟ್ ನಡೆಸುತ್ತಿದ್ದರು'' ಎಂದು ಝೀ ನ್ಯೂಸ್ ಬರೆಯಲಾಗಿತ್ತು. ಈ ಘಟನೆ ಯಾವಾಗ ನಡೆದಿದ್ದು ಎಂಬುದರ ಉಲ್ಲೇಖ ಮಾತ್ರ ಇರಲಿಲ್ಲ.

ಝೀ ನ್ಯೂಸ್ ಮೊದಲು ಪ್ರಕಟಿಸಿದ ಲೇಖನ ಈಗಲೂ msn.comನಲ್ಲಿ ಲಭ್ಯವಿದೆ. ಆ ರೆಸ್ಟಾರೆಂಟ್   ಮುಸ್ಲಿಮೇತರರಿಗೆ ಹಾಗೂ ಮುಸ್ಲಿಮರಿಗೆ  ಬೇರೆ ಬೇರೆ ಆಹಾರ ತಯಾರಿಸುತ್ತಿತ್ತು ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ. ಆದರೆ ನಂತರ ಝೀ ನ್ಯೂಸ್ ಪ್ರಕಟಿಸಿದ ವರದಿಯಲ್ಲಿ ಈ ರೀತಿ ಆಹಾರವನ್ನು ಕಲುಷಿತಗೊಳಿಸುವುದು ಭಾರತದಲ್ಲಿ ಮಾತ್ರವಲ್ಲ ಬದಲಾಗಿ ಇಂಗ್ಲೆಂಡಿನಲ್ಲೂ ನಡೆದಿದೆ ಎಂದು ಬರೆಯಲಾಗಿದೆ. ಈ ಲೇಖನದ ಯುಆರ್ ಎಲ್ ಈಗಲೂ ‘ತಬ್ಲೀಗಿ ಜಮಾತ್ ಮೆಂಟಾಲಿಟಿ’ ಎಂದೇ ಇದೆ.

ಎಪ್ರಿಲ್ 21ರಿಂದ ವೈರಲ್ ಆಗಿರುವ ಸಂದೇಶವೊಂದರ ಆಧಾರದಲ್ಲಿ ‘ಝೀ ನ್ಯೂಸ್’ ವರದಿ ಪ್ರಕಟಿಸಿದೆ. ಈ ಸಂದೇಶದಲ್ಲಿ ಇಂಗ್ಲೆಂಡ್‍ನ Daily Mail ಲೇಖನದ ಲಿಂಕ್ ಇದೆ. ಈ ವರದಿಯ ಪ್ರಕಾರ ಈ ಘಟನೆ ಸೆಪ್ಟೆಂಬರ್ 2015ರಲ್ಲಿ ನಡೆದಿತ್ತು.

ಡೈಲಿ ಮೇಲ್ ವರದಿಯಲ್ಲಿ ಈ ರೆಸ್ಟಾರೆಂಟ್ ಮಾಲಕರು ಮುಸ್ಲಿಮೇತರರಿಗೆ ಮಾತ್ರ ನೈರ್ಮಲ್ಯರಹಿತ ಆಹಾರ ಒದಗಿಸುತ್ತಿದ್ದರು ಎಂಬ ವಿಚಾರ ಎಲ್ಲಿಯೂ ಉಲ್ಲೇಖವಿಲ್ಲ. ‘ಬಿಬಿಸಿ’ ಹಾಗೂ ‘ದಿ ಗಾರ್ಡಿಯನ್’ ಕೂಡ 2015ರಲ್ಲಿ ಇದೇ ವರದಿ ಪ್ರಕಟಿಸಿತ್ತು ಆದರೆ ಎಲ್ಲಿಯೂ ಧರ್ಮದ ವಿಚಾರವಿಲ್ಲ.

ಆದುದರಿಂದ ಮುಸ್ಲಿಮೇತರರಿಗೆ ಮಲದಿಂದ ಮಿಶ್ರಣ ಮಾಡಿದ ಆಹಾರ ನೀಡಲಾಗುತ್ತಿತ್ತು ಎಂಬ ‘ಝೀ ನ್ಯೂಸ್’ ವರದಿ ಸುಳ್ಳು.  ಆದರೆ ಆಹಾರವು ಮಾನವ ಮಲದಿಂದ ಕಲುಷಿತವಾಗಿತ್ತೆಂಬುದು ನಿಜ. ಇದು ಉದ್ದೇಶಪೂರ್ವಕವಾಗಿರಲಿಲ್ಲ ಹಾಗೂ ಅಲ್ಲಿನ ಸಿಬ್ಬಂದಿ ಸರಿಯಾಗಿ ಕೈತೊಳೆಯದೇ ಇದ್ದುದರಿಂದ ಹೀಗಾಗಿತ್ತು. ಇದೇ ಕಾರಣದಿಂದ 142 ಗ್ರಾಹಕರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು 2015ರ ವರದಿಗಳು ಉಲ್ಲೇಖಿಸಿದ್ದವು. ಇದರಿಂದಾಗಿ ರೆಸ್ಟಾರೆಂಟ್ ಮಾಲಕರಿಗೆ ನಾಲ್ಕು ತಿಂಗಳು ಜೈಲು ಶಿಕ್ಷೆ ಹಾಗೂ 25,000 ಪೌಂಡ್ ದಂಡ ವಿಧಿಸಲಾಗಿತ್ತು.

“ಸೋಪ್ ಮತ್ತು ನೀರಿನಿಂದ ಸರಿಯಾಗಿ ಕೈತೊಳೆಯದೆ ಇರುವುದರಿಂದ ಆಹಾರ ಕಲುಷಿತಗೊಂಡಿದೆ” ಎಂದು ಶಿಕ್ಷೆ ಪ್ರಕಟಿಸಿದ್ದ ನ್ಯಾಯಾಧೀಶರಾದ ಜಸ್ಟಿಸ್ ಜೆರೆಮಿ ಲೀ ಹೇಳಿದ್ದಾಗಿ ಈ ವರದಿಗಳು ತಿಳಿಸಿವೆ.

“ಹೊಟೇಲ್ ಸಿಬ್ಬಂದಿ ಶೌಚಾಲಯಕ್ಕೆ ಹೋದ ನಂತರ ಸರಿಯಾಗಿ ಕೈತೊಳೆಯದ ಕಾರಣದಿಂದ 100ಕ್ಕೂ ಅಧಿಕ ಗ್ರಾಹಕರು ಅಸ್ವಸ್ಥರಾಗಿದ್ದಾರೆ” ಎಂದು ದ ಗಾರ್ಡಿಯನ್ 2015ರಲ್ಲಿ ಪ್ರಕಟಿಸಿದ್ದ ವರದಿಯಲ್ಲಿ ತಿಳಿಸಿತ್ತು.

ಈ ಮೂಲಕ ತಿಳಿಯುವುದೇನೆಂದರೆ ಝೀ ನ್ಯೂಸ್ ನ ‘ಮುಸ್ಲಿಮೇತರರಿಗೆ ಕಲುಷಿತ ಆಹಾರ ನೀಡುತ್ತಿದ್ದರೆಂಬ’ ಆರೋಪ ಸಂಪೂರ್ಣ ಸುಳ್ಳಾಗಿದ್ದು, ಈ ಹೊಟೇಲ್ ಗೆ ಯಾರೆಲ್ಲಾ ಬಂದಿದ್ದರೋ ಅವರೆಲ್ಲರೂ ಅಸ್ವಸ್ಥರಾಗಿದ್ದರು. ಕೊರೋನ ವೈರಸ್ ನಡುವೆ ಕೋಮು ದ್ವೇಷ ಹರಡುತ್ತಿರುವ ಈ ಸಂದರ್ಭದಲ್ಲೇ ತಬ್ಲೀಗಿಗಳ ಮೇಲೆ ಆರೋಪ ಹೊರಿಸಿ 2015ರ ಘಟನೆಯನ್ನು ‘ಝೀ ನ್ಯೂಸ್’ ಪ್ರಕಟಿಸಿದೆ. ಮೂರನೆಯದಾಗಿ 2015ರಲ್ಲಿ ನಡೆದಿದ್ದ ಈ ಘಟನೆಯಲ್ಲಿ ಯಾರೂ ಉದ್ದೇಶಪೂರ್ವಕವಾಗಿ ಮಾನವ ಮಲವನ್ನು ಆಹಾರಕ್ಕೆ ಸೇರಿಸಿರಲಿಲ್ಲ. ಇದು ರೆಸ್ಟಾರೆಂಟ್ ಸಿಬ್ಬಂದಿಯ ನಿರ್ಲಕ್ಷ್ಯ , ಸರಿಯಾಗಿ ಕೈ ತೊಳೆಯದೆ ಇರುವುದರಿಂದ ನಡೆದ ಗಂಭೀರ ತಪ್ಪು ಎಂದು ನ್ಯಾಯಾಲಯವೇ 2015ರಲ್ಲಿ ತಿಳಿಸಿತ್ತು.

Writer - altnews.in, ಪ್ರಿಯಾಂಕಾ ಝಾ

contributor

Editor - altnews.in, ಪ್ರಿಯಾಂಕಾ ಝಾ

contributor

Similar News