ಲಾಕ್‌ಡೌನ್ ಅವಧಿಯಲ್ಲಿ ‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿ: ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2020-04-28 15:56 GMT

ಹೊಸದಿಲ್ಲಿ, ಎ.28: ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳು ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವಂತಾಗಲು ಪ್ರಸಕ್ತ ಕೊರೋನ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ‘ಒಂದು ದೇಶ ಒಂದು ಪಡಿತರ ಚೀಟಿ’   ಯೋಜನೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿದೆ. ಕೇಂದ್ರ ಸರಕಾರವು ಈ ಯೋಜನೆಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ.

ಲಾಕ್‌ಡೌನ್‌ನಿಂದಾಗಿ ವಿವಿಧ ಕಡೆಗಳಲ್ಲಿ ಅತಂತ್ರರಾಗಿರುವ ವಲಸೆ ಕಾರ್ಮಿಕರು, ಫಲಾನುಭವಿಗಳು ಮತ್ತು ಇತರ ರಾಜ್ಯಗಳ ನಿವಾಸಿಗಳಿಗಾಗಿ ಯೋಜನೆಯನ್ನು ಆರಂಭಿಸುವಂತೆ ಸರಕಾರಕ್ಕೆ ನಿರ್ದೇಶ ಕೋರಿ ವಕೀಲ ರೀಪಕ್ ಕನ್ಸಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಎಸ್.ಕೆ.ಕೌಲ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು, ಸದ್ರಿ ಯೋಜನೆಯನ್ನು ಈ ಹಂತದಲ್ಲಿ ಜಾರಿಗೊಳಿಸುವುದು ಕಾರ್ಯಸಾಧ್ಯವೇ ಇಲ್ಲವೇ ಎನ್ನುವುದನ್ನು ಪರಿಶೀಲಿಸುವಂತೆ ಮತ್ತು ಹಾಲಿ ಪರಿಸ್ಥಿತಿಗಳನ್ನು ಗಮನದಲ್ಲ್ಲಿಟ್ಟುಕೊಂಡು ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತು.

ಹಾಲಿ ಬಾಡಿಗೆ ಮನೆಗಳಲ್ಲಿ ಅಥವಾ ತಾತ್ಕಾಲಿಕ ಶಿಬಿರಗಳಲ್ಲಿ ವಾಸವಿರುವ ವಲಸೆ ಕಾರ್ಮಿಕರು ಯಾವುದೇ ಗುರುತು ಚೀಟಿಯ ಕೊರತೆಯಿಂದಾಗಿ ಉಪವಾಸ ಬೀಳದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆಯೂ ಕನ್ಸಾಲ್ ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News